ಅನಾಥ ಶವಕ್ಕೆ ಹೆಗಲು ಕೊಟ್ಟ ಪಿಎಸ್ಐ
Views: 40
ಕನ್ನಡ ಕರಾವಳಿ ಸುದ್ದಿ: ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ದೇವನಗುಲ್ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವೃದ್ಧರೊಬ್ಬರ ಅನಾಥ ಶವ ಪತ್ತೆಯಾಗಿದೆ. ಮೃತದೇಹವನ್ನು ಸ್ವತಃ ಹೆಗಲ ಮೇಲೆ ಹೊತ್ತು ಸಾಗಿಸುವ ಮೂಲಕ ಬಣಕಲ್ ಪೊಲೀಸ್ ಠಾಣೆಯ ಪಿಎಸ್ಐ ದಿಲೀಪ್ ಕುಮಾರ್ ನಡೆಗೆ ಜಿಲ್ಲೆಯಲ್ಲಿ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.
ಮೃತ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಮೂಡಿಗೆರೆ ಭಾಗದಲ್ಲಿ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಬಳಿ ಅಲೆದಾಡುತ್ತಿದ್ದು, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು. ಸ್ಥಳೀಯರು ಅವರ ಊರಿನ ಕುರಿತು ವಿಚಾರಿಸಿದಾಗ ‘ಮಂಡ್ಯ’ ಎಂದು ಮಾತ್ರ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಅವರ ಪೂರ್ಣ ವಿಳಾಸ ಅಥವಾ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ದೇವನಗುಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಬೇಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಕಾರ್ಮಿಕರು ಸಮೀಪದ ಕಾಡಿನೊಳಗೆ ಶವವಿರುವುದನ್ನು ಗಮನಿಸಿದ್ದಾರೆ. ಹಾಗೂ ಬಿದಿರು ಕಡಿಯುವ ಕೆಲ ವ್ಯಕ್ತಿಗಳು ಈ ಶವವನ್ನು ನೋಡಿದ್ದು, ತಕ್ಷಣವೇ ಅವರು ಬಣಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಣಕಲ್ ಪಿಎಸ್ಐ ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ತನಿಖೆಯಲ್ಲಿ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಅಥವಾ ಅನುಮಾನಾಸ್ಪದ ಲಕ್ಷಣಗಳು ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸಹಜ ಸಾವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಂಕಿಸಲಾಗಿದೆ. ಬಳಿಕ ಸಮಾಜಸೇವಕ ಆರಿಫ್ ಅವರ ಆಂಬ್ಯುಲೆನ್ಸ್ ಸಹಾಯದಿಂದ ಮೃತದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.
ಅನಾಥ ಶವವನ್ನು ಸಾಗಿಸಲು ಯಾರೂ ಮುಂದೆ ಬರದ ಸಂದರ್ಭದಲ್ಲಿ, ಪಿಎಸ್ಐ ದಿಲೀಪ್ ಕುಮಾರ್ ಸ್ವತಃ ಮೃತ ದೇಹವನ್ನು ಹೆಗಲ ಮೇಲೆ ಹೊತ್ತು ಆಂಬ್ಯುಲೆನ್ಸ್‌ಗೆ ಸಾಗಿಸಿದರು. ಪೊಲೀಸ್ ಅಧಿಕಾರಿಯ ಈ ನಡೆ ಸ್ಥಳೀಯರ ಮನ ಗೆದ್ದಿದ್ದು, ಜಿಲ್ಲೆಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.






