ಯುವಜನ

ಅಕ್ಕನ ಮದುವೆಗಾಗಿ ಕೂಡಿಟ್ಟಿದ್ದ ಚಿನ್ನಾಭರಣಗಳನ್ನು ಪ್ರೇಮಿಗೆ ನೀಡಿದ ವಿದ್ಯಾರ್ಥಿನಿ ದುರಂತ ಸಾವು! 

Views: 49

ಕನ್ನಡ ಕರಾವಳಿ ಸುದ್ದಿ: ಅಕ್ಕನ ಮದುವೆಗಾಗಿ ಕೂಡಿಟ್ಟಿದ್ದ ಚಿನ್ನಾಭರಣಗಳನ್ನು ನೀಡಿದ್ದ ವಿದ್ಯಾರ್ಥಿನಿಯೊಬ್ಬಳು ಪ್ರಿಯಕರನ ವಂಚನೆ ಹಾಗೂ ಬೆದರಿಕೆಗೆ ಬೇಸತ್ತು ಹಾಸ್ಟೆಲ್ ಕೋಣೆಯಲ್ಲಿ ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಕಡಪ ನಗರದಲ್ಲಿ ನಡೆದಿದೆ.

ಕರ್ನೂಲು ನಗರದ ನಿವಾಸಿಗಳಾದ ಪ್ರೇಮ್ ಕುಮಾರ್ ಮತ್ತು ಮನೋಹರಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪ್ರೇಮ್ ಕುಮಾರ್ ಮೂರು ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಪತಿಯ ಮರಣದ ಬಳಿಕ ಅನುಕಂಪದ ಆಧಾರದ ಮೇಲೆ ಮನೋಹರಿ ಅವರು ಹೋಮ್ ಗಾರ್ಡ್ ಹುದ್ದೆಗೆ ಸೇರಿ ಕಷ್ಟಪಟ್ಟು ಕುಟುಂಬವನ್ನು ಪೋಷಿಸುತ್ತಿದ್ದರು. ಈ ದಂಪತಿಯ ಕಿರಿಯ ಪುತ್ರಿ ದಿವ್ಯಾ ದೀಪಿಕಾ (23) ಕಡಪ ನಗರದ ಖಾಸಗಿ ಕಾಲೇಜೊಂದರಲ್ಲಿ ಬ್ಯಾಚುಲರ್ ಆಫ್ ಫಿಸಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದು, ಸ್ಥಳೀಯ ಖಾಸಗಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.

ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹೈದರಾಬಾದ್ ಮೂಲದ ಸಂಜಯ್ ಎಂಬ ಯುವಕನ ಪರಿಚಯ ದಿವ್ಯಾ ದೀಪಿಕಾಗೆ ಆಗಿದ್ದು, ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ನಡುವೆ ಇತ್ತೀಚೆಗೆ ತನ್ನ ತವರು ಕರ್ನೂಲಿಗೆ ಹೋಗಿದ್ದ ದಿವ್ಯಾ ದೀಪಿಕಾ ಬಳಿ ಪ್ರಿಯಕರ ಸಂಜಯ್ ತುರ್ತಾಗಿ ಹಣದ ಅವಶ್ಯಕತೆಯಿದೆ ಎಂದು ಕೇಳಿದ್ದಾನೆ. ಪ್ರಿಯಕರನ ಸಂಕಷ್ಟಕ್ಕೆ ನೆರವಾಗುವ ಭರವಸೆಯೊಂದಿಗೆ ಆಕೆ, ಮನೆಯಲ್ಲಿ ತನ್ನ ಅಕ್ಕನ ಮದುವೆಗಾಗಿ ತೆಗೆದಿಟ್ಟಿದ್ದ ಚಿನ್ನದ ಸರ ಮತ್ತು ಉಂಗುರವನ್ನು ಯಾರಿಗೂ ತಿಳಿಯದಂತೆ ತಂದು ಸಂಜಯ್ ಕೈಗೆ ನೀಡಿದ್ದಳು. ಆ ಚಿನ್ನಾಭರಣಗಳನ್ನು ಪಡೆದ ಸಂಜಯ್, ಅವುಗಳನ್ನು ಅಡವಿಟ್ಟು ಹಣ ಪಡೆದುಕೊಂಡಿದ್ದಾನೆ.

ಇತ್ತ ಮನೆಯಲ್ಲಿ ದಿವ್ಯಾ ದೀಪಿಕಾಳ ಅಕ್ಕನ ಮದುವೆ ನಿಶ್ಚಯವಾಗಿದ್ದು, ವಿವಾಹದ ದಿನಾಂಕ ಸಮೀಪಿಸುತ್ತಿದ್ದಂತೆ ತಾಯಿ ಮನೋಹರಿ ಅವರು ಮದುವೆ ಸಿದ್ಧತೆಗಾಗಿ ಮಗಳ ಬಳಿ ಆ ಚಿನ್ನಾಭರಣಗಳನ್ನು ತರುವಂತೆ ಕೇಳಿದ್ದಾರೆ. ಇದರಿಂದ ಗಾಬರಿಗೊಂಡ ದಿವ್ಯಾ, ತನ್ನ ಪ್ರಿಯಕರ ಸಂಜಯ್‌ಗೆ ಹಲವು ಬಾರಿ ಕರೆ ಮಾಡಿ ಅಡವಿಟ್ಟಿರುವ ಚಿನ್ನವನ್ನು ತಕ್ಷಣ ಬಿಡಿಸಿಕೊಡುವಂತೆ ಅಂಗಲಾಚಿದ್ದಾಳೆ. ಆದರೆ, ಸಂಜಯ್ ಆಕೆಯ ಮಾತಿಗೆ ನಿರ್ಲಕ್ಷ್ಯದಿಂದ ಉತ್ತರಿಸುತ್ತಾ ದಿನಗಳನ್ನು ದೂಡಿದ್ದಲ್ಲದೆ, ಪದೇಪದೆ ಚಿನ್ನ ಕೇಳಿದ್ದಕ್ಕೆ ಆಕೆಗೇ ಬೆದರಿಕೆ ಹಾಕಲಾರಂಭಿಸಿದ್ದಾನೆ.

ಒಂದೆಡೆ ಅಕ್ಕನ ಮದುವೆಯ ಸಂಭ್ರಮ ನಡೆಯುತ್ತಿದ್ದರೆ, ಇನ್ನೊಂದೆಡೆ ತಾಯಿ ಕೇಳುತ್ತಿರುವ ಚಿನ್ನಾಭರಣಗಳಿಗೆ ಏನು ಉತ್ತರ ನೀಡುವುದು ಎಂದು ತಿಳಿಯದೆ ದಿವ್ಯಾ ದೀಪಿಕಾ ತೀವ್ರ ಅಸಹಾಯಕತೆ ಮತ್ತು ಮಾನಸಿಕ ವೇದನೆಗೆ ಒಳಗಾಗಿದ್ದಳು. ಪ್ರಿಯಕರನ ನಂಬಿಕೆ ದ್ರೋಹ ಹಾಗೂ ಮನೆಯವರ ಎದುರು ತಲೆ ಎತ್ತಲಾಗದ ಸಂಕಟವನ್ನು ತಾಳಲಾರದೆ ಆಕೆ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 

 

Related Articles

Back to top button
error: Content is protected !!