ಸರ್ಕಾರದ ಮಾರ್ಗಸೂಚಿಯನ್ನು ಮೀರಿ ಮಕ್ಕಳಿಂದಲೇ ಶೌಚಾಲಯ ಕ್ಲೀನ್ ಮಾಡಿಸಿದ ಮತ್ತೊಂದು ಘಟನೆ ವರದಿ

Views: 79
ದಾವಣಗೆರೆ : ಯಾವುದೇ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಸ್ವಚ್ಛತೆ ನಿರ್ವಹಿಸಲು ವಿದ್ಯಾರ್ಥಿಗಳನ್ನು ಬಳಸಬಾರದು ಎಂಬ ಸರ್ಕಾರದ ಮಾರ್ಗಸೂಚಿಯನ್ನು ಮೀರಿ ಮಕ್ಕಳಿಂದಲೇ ಶೌಚಾಲಯ ಕ್ಲೀನ್ ಮಾಡಿಸಿ ಮತ್ತೊಂದು ಘಟನೆ ವರದಿಯಾಗಿದೆ.
ಶಿಕ್ಷಣ ಸಚಿವರ ತವರಾಗಿರುವ ಶಿವಮೊಗ್ಗ, ರಾಷ್ಟ್ರ ರಾಜಧಾನಿ ಬೆಂಗಳೂರು, ಕೋಲಾರ, ಕಲಬುರಗಿಯ ಬಳಿಕ ಇಂಥಹುದೇ ಇನ್ನೊಂದು ಘಟನೆ ನಡೆದಿರುವುದು ದಾವಣಗೆರೆಯಲ್ಲಿ. ದಾವಣಗೆರೆಯಲ್ಲಿ ಕೂಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಾಲಕಿಯರಿಂದ ಶೌಚಾಲಯ ಸ್ವಚ್ಛಗೊಳಿಸುವ ಅಮಾನವೀಯ ಘಟನೆ ನಡೆದಿದೆ.
ದಾವಣಗೆರೆ ತಾಲೂಕಿನ ಮಳೆಕಟ್ಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಲಾಗಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತಕ್ಕೂ ಅಧಿಕ ಬಾಲಕಿಯರ ಮೂಲಕ ಶೌಚಾಲಯ ಸ್ವಚ್ಛಗೊಳಿಸಿದ್ದು ಬೆಳಕಿಗೆ ಬಂದಿದ್ದು ಇದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಬಕೆಟ್ ನಲ್ಲಿ ನೀರು ತಂದು ಪೊರಕೆಯಿಂದ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಸ್ವತಃ ಗಾಂಧಿಜಿಯೇ ತಮ್ಮ ಶೌಚಾಲಯ ಸ್ವಚ್ಛ ಮಾಡಿಕೊಳ್ಳುತ್ತಿದ್ದರು. ನೀವು ಸ್ವಚ್ಚ ಗೊಳಿಸಿದರೆ ತಪ್ಪಿಲ್ಲ ಎಂದು ಎಂದು ಮುಖ್ಯ ಶಿಕ್ಷಕಿ ಸೂಚನೆ ನೀಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಶಾಲಾ ಮಕ್ಕಳು ಶೌಚಾಲಯ ಸ್ವಚ್ಛ ಮಾಡುವ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕರು ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ ವಿದ್ಯಾರ್ಥಿನಿಯರನ್ನು ಅಮಾನವೀಯವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಅವರ ಆಕ್ರೋಶ.