ಜನಮನ

ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿದ ಮಹಿಳೆ 

Views: 72

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಹೆಸರು ಹೇಳಿಕೊಂಡು ಬ್ಯಾಂಕ್‌ಗಳಿಂದ ಸಾಲ ಕೊಡಿಸುವುದಾಗಿ ನಂಬಿಸಿ ಹಲವಾರು ಮಂದಿಗೆ ಐನಾತಿ ಮಹಿಳೆಯೊಬ್ಬಳ ಗ್ಯಾಂಗ್ ಕೋಟ್ಯಂತರ ರೂ. ವಂಚಿಸಿರುವ ಘಟನೆ ನಗರದ ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆಯರು ಆಘಾತಕ್ಕೊಳಗಾಗಿ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬ್ಲೂ ವಿಂಗ್ಸ್ ಎಂಬ ಹೆಸರಿನ ಟ್ರಸ್ಟ್ ಮಾಡಿಕೊಂಡಿರುವ ತಮಿಳುನಾಡಿನ ಹೊಸೂರು ಮೂಲದ ಪವಿತ್ರ ಮತ್ತವರ ಗ್ಯಾಂಗ್ ಹಲವಾರು ಮಂದಿಗೆ ವಂಚನೆ ನಡೆಸಿದ್ದು,ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

ಟ್ರಸ್ಟ್‌ಗೆ ಆರ್‌ಬಿಐನಿಂದ 17 ಕೋಟಿ ಬಂದಿರುವುದಾಗಿ ಹಾಗೂ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರ ಸಹಿ ಇರುವ ನಕಲಿ ಕಾಪಿ ತೋರಿಸಿ ಚಂದಾಪುರ, ಅತ್ತಿಬೆಲೆ, ಹೊಸೂರು, ಧರ್ಮಪುರಿ ಸೇರಿದಂತೆ ಹಲವು ಕಡೆಗಳಲ್ಲಿ ನೂರಾರು ಮಂದಿಗೆ ವಂಚನೆ ನಡೆಸಿದ್ದಾಳೆ.

ಕಂತೆ ಕಂತೆ ಹಣದ ನೋಟುಗಳ ವಿಡಿಯೋಗಳನ್ನು ಕಳುಹಿಸಿ ಜನರನ್ನು ಮರುಳು ಮಾಡಿದ ಪವಿತ್ರಾ, ಒಬ್ಬರಿಗೆ 10ಲಕ್ಷ ಸಾಲ ನೀಡಿದರೆ ಅದರಲ್ಲಿ ಐದು ಲಕ್ಷ ರಿಯಾಯಿತಿ ಎಂದು ನಂಬಿಸಿದ್ದಳು.ಸಾಲ ಬೇಕು ಅಂದರೆ ಮೊದಲು ಹಣ ಡೆಪಾಸಿಟ್ ಮಾಡಬೇಕೆಂದು ಕಥೆ ಕಟ್ಟಿದ್ದಾಳೆ. ಇದನ್ನು ನಂಬಿದ ಜನರು ಲಕ್ಷಾಂತರ ರೂ ಹಣ ನೀಡಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದಾರೆ.ಹಣ ಕಳೆದುಕೊಂಡವರು ಈಗ ಕೈ ಹಿಸುಕಿಕೊಳ್ಳುವಂತಾಗಿದೆ. 10 ಲಕ್ಷ ಸಾಲ ನೀಡಿದರೆ ೫ ಲಕ್ಷ ರಿಯಾಯಿತಿ ಸಿಗಲಿದೆ ಎಂದು ಜನರು ಸಾಲ ಪಡೆಯಲು ಮುಗಿಬಿದ್ದಿದ್ದಾರೆ.ಆದರೆ, ಕೆಲವು ತಿಂಗಳಾದರೂ ಸಾಲ ಬಾರದೆ ಇದ್ದಾಗ ವಂಚಕಿ ಪವಿತ್ರಾಳ ಕಳ್ಳಾಟ ಬಯಲಾಗಿದೆ. ಸಾಲದ ಸುಳಿಗೆ ಸಿಲುಕಿದ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ಗ್ಯಾಂಗ್ ವಂಚನೆ ಸಂಬಂಧ ಸೂರ್ಯನಗರ, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪವಿತ್ರ, ಪ್ರವೀಣ್, ಯಲ್ಲಪ್ಪ, ಶೀಲ, ರುಕ್ಮಿಣಿ, ರಾಧ, ಮಮತಾ, ನೆಹರೂಜಿ, ಶರತ್ ಕುಮಾರ್, ಸತೀಶ್, ಮಂಜುಳಾ, ಹಾಲ್ಬರ್ಟ್ ಮಾರ್ಟಿನ್, ಹೇಮಲತಾ, ಶಾಲಿನಿ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ವೀಡಿಯೋದಲ್ಲಿ ತೋರಿಸಿರುವ ಕಂತೆ ಕಂತೆ ಹಣಗಳ ತುಣುಕು ಎಲ್ಲಿಂದ ಬಂದಿದೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.ಈ ಎಲ್ಲ ಆಯಾಮಗಳ ಬೆನ್ನತ್ತಿರುವ ಪೊಲೀಸರು ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಚಿವೆ ನಿರ್ಮಲಾ,ಆರ್‌ಬಿಐ ಹೆಸರಿನಲ್ಲಿ ಅಮಾಯಕರಿಗೆ ಪಂಗನಾಮ

ಹೊಸೂರು ಮೂಲದ ಪವಿತ್ರಾ ಗ್ಯಾಂಗ್‌ನಿಂದ ವಂಚನೆ

10 ಲಕ್ಷ ಸಾಲ ನೀಡಿದರೆ ೫ ಲಕ್ಷ ರಿಯಾಯಿತಿ

ಪವಿತ್ರಾಳ ಮೋಡಿಗೆ ಮರುಳಾದ ಜನ

ಹಣ ಕಳೆದುಕೊಂಡು ಕಂಗಾಲು

ಕಾರ್ಯಾಚರಣೆಗೆ ವಿಶೇಷ ಪೊಲೀಸ್ ತಂಡ ರಚನೆ

Related Articles

Back to top button