ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ: “ರಾಷ್ಟ್ರೀಯ ಮತದಾರರ ದಿನಾಚರಣೆ”

Views: 202
“ಸಂವಿಧಾನದ ಆಶಯಗಳನ್ನು ಆಥೈಸಿಕೊಂಡು ನಾವು ನಮ್ಮ ಮತಗಳನ್ನು ಚಲಾಯಿಸಿದಾಗ ಸೂಕ್ತ ವ್ಯಕ್ತಿಗಳು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಗೊಂಡು, ಸಮರ್ಥ ನಾಯಕತ್ವದಲ್ಲಿ ರಾಜಕೀಯ ಸ್ಥಿರತೆ, ಸಮಾಜಿಕ ಬದ್ಧತೆಯೊಂದಿಗೆ ಸರ್ವತೋಮುಖ ಅಭಿವೃದ್ಧಿಯು ಸಾಧ್ಯವಾಗುತ್ತದೆ. ಮತದಾನ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ರಾಷ್ಟ್ರೀಯ ಮತದಾನದ ದಿನದ ಅಂಗವಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ, ಯುವ ಮತದಾರರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಕನ್ನಡ ಕರಾವಳಿ ಸಂಪಾದಕ ಸುಧಾಕರ ವಕ್ವಾಡಿ ತಿಳಿಸಿದರು.
ಇವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ, ಇಲ್ಲಿ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ಎಸ್.ನಾಯಕ ವಹಿಸಿ, ಪ್ರತಿಜ್ಙಾ ವಿಧಿಯನ್ನು ಬೋಧಿಸಿ, ‘ವಿದ್ಯಾರ್ಥಿಗಳಾದ ನೀವು ಯಾವುದೇ ಪ್ರಲೋಭನೆಗಳಿಗೆ ಒಳಗಾಗದೆ ಮತ ಚಲಾಯಿಸುವುದರೊಂದಿಗೆ, ಸಮಾಜದಲ್ಲಿ ಮತದಾನದ ಮಹತ್ವದ ಬಗ್ಗೆ ತಿಳಿ ಹೇಳಿದಾಗ, ಸೂಕ್ತ ಪ್ರತಿನಿಧಿಯನ್ನು ಆಯ್ಕೆ ಮಾಡುವುದರೊಂದಿಗೆ, ಪ್ರಜಾಪ್ರಭುತ್ವ ಇನ್ನಷ್ಟು ಸಧೃಡಗೊಳ್ಳುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ರಾಮರಾಯ ಆಚಾರ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು ಮಾತನಾಡಿ ‘ಚುನಾವಣೆಯಲ್ಲಿ ಒಂದು ಮತ ಸಾಕಷ್ಟು ಪ್ರಮುಖ ಪಾತ್ರ ವಹಿಸುತ್ತದೆ. ಮತದಾನ ದಿನ ತಪ್ಪದೇ ಮತದಾನ ಮಾಡಿ ಜವಾಬ್ದಾರಿಯುತ ನಾಗರಿಕರಾಗಿ ಪ್ರಜಾಪ್ರಭುತ್ವವನ್ನು ಸದೃಢವನ್ನಾಗಿಸಿ ಎಂದರು’.ಆಂತರಿಕ ಗುಣಮಟ್ಟ ಮತದಾರರ ಸಾಕ್ಷರತಾ ಸಂಘದ ಸಂಚಾಲಕರಾದ ಡಾ.ಭಾಗೀರಥಿ ನಾಯ್ಕ, ವಿದ್ಯಾರ್ಥಿ ನಾಯಕ ಗೌರೀಶ ಉಪಸ್ಥಿತರಿದ್ದರು.
ಕಾಯಕ್ರಮವನ್ನು ಅನುಷಾ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.ಸಂತೋಷ ನಾಯ್ಕ ಹೆಚ್. ಕಾರ್ಯಕ್ರಮಾಧಿಕಾರಿಗಳು , ರಾಷ್ಟ್ರೀಯ ಸೇವಾ ಯೋಜನಾ ಘಟಕ,ಇವರು ಸ್ವಾಗತಿಸಿದರು. ಸತ್ಯವ್ಯಾಸ ವಂದಿಸಿದರು. ಅನನ್ಯ ಕಾರ್ಯಕ್ರಮ ನಿರೂಪಿಸಿದರು.