ಸಾಂಸ್ಕೃತಿಕ

ರಮೇಶ್‌ ಶೆಟ್ಟಿಗಾರ ಮಂಜೇಶ್ವರ ನಾಲ್ಕನೇ ಕೃತಿ “ಎರಡನೇ ದೇವರು” ಸಾರಸ್ವತಲೋಕಕ್ಕೆ

Views: 71

ಮಂಗಳೂರು: ಕಾದಂಬರಿಕಾರರು ತಮ್ಮ ಇಂಗಿತವನ್ನು ಬರೆಯುವಾಗ ಇದೊಂದು ಕಾಲ್ಪನಿಕ ಸನ್ನಿವೇಶವಿರುವ ಕಾಲ್ಪನಿಕ ಕೃತಿ ಎಂದು ಹೇಳಿದರೂ ಕಾದಂಬರಿಯನ್ನು ಗಮನವಿಟ್ಟು ಓದಿದಾಗ ಇದೊಂದು ಯಥಾರ್ಥವಾದ ವಾಸ್ತವಾಂಶಗಳನ್ನು ಮೈಗೂಡಿಸಿರುವ ನೈಜತೆಯ ಪ್ರತಿರೂಪವೇ ಎಂದು ಅನ್ನಿಸುವುದರಲ್ಲಿ ತಪ್ಪಾಗದು. ಈ ಮೊದಲು ಮೂರು ಕೃತಿಗಳನ್ನು ಕನ್ನಡ ಸಾರಸ್ವತಲೋಕಕ್ಕೆ ಸಮರ್ಪಿಸಿದ ಶ್ರೀ ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ ಅವರು ತನ್ನ ನಾಲ್ಕನೇ ಕೃತಿ “ಎರಡನೇ ದೇವರು” ಕಾದಂಬರಿಯನ್ನು ಹೊಸ ಪ್ರಯೋಗದೊಂದಿಗೆ ಬರೆದಿದ್ದಾರೆ, ಎಂದರೂ ತಪ್ಪಾಗಲಾರದು.

ಈ ಕಾದಂಬರಿಯಲ್ಲಿ ದಿನಾಂಕಗಳನ್ನು ನಮೂದಿಸುವ ಮುಖೇನ, ಸ್ಥಳಗಳ ಹೆಸರು, ಘಟನೆಗಳ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಮಂಗಳೂರು ಸುತ್ತಮುತ್ತಲಿನ ಸ್ಥಳಗಳ ಹೆಸರನ್ನು ಕರಾರುವಕ್ಕಾಗಿ ನಮೂದಿಸುರುವ ಲೇಖಕರು ಈ ಕಾದಂಬರಿ ಬರೆಯುವ ಮುಂಚಿತವಾಗಿ ಮಂಗಳೂರಿನ ಅಧ್ಯಯನ ಮಾಡಿರುವುದು ಸ್ಪಷ್ಟವಾಗುತ್ತದೆ.

ಕಾದಂಬರಿಯ ಪ್ರಮುಖ ಪಾತ್ರಧಾರಿ ಪೂರ್ಣಚಂದ್ರನ ಮುಖೇನ ಮುಂದುವರಿದು, ಮಧ್ಯಮವರ್ಗದ ವರ್ಗದ ಒಂದು ಮನೆಯ ಸಂಸಾರದಲ್ಲಿ ನಡೆಯುವ ಹಾಗುಹೋಗುಗಳು, ಅದರಲ್ಲೂ ಸಂಸಾರದಲ್ಲಿ ನಡೆದ ದುರ್ಘಟಣೆಗಳ ಚಿತ್ರಣಗಳು ಯಥಾವತ್ತಾಗಿ ಮೂಡಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ಈ ಕಾದಂಬರಿ ಸುಧೀರ್ಘವೆನಿಸಿದರೂ ಪಾತ್ರಗಳನ್ನು ಪೋಷಿಸುವಲ್ಲಿ ಹಾಗೂ ಅವುಗಳನ್ನು ಅವಕಾಶಕ್ಕೆ ಸರಿಯಾಗಿ ಅನಾವರಣಗೊಳ್ಳುವಂತೆ ಮಾಡುವ ಮೂಲಕ ಓದುಗರನ್ನು ಅನಾಯಾಸವಾಗಿ ಓದಿಸಿಕೊಂಡು ಹೋಗುವಂತೆ ಮಾಡಿದೆ, ಎನ್ನಬಹುದು. ಪೂರ್ಣಚಂದ್ರನ ಬಾಳಿನಲ್ಲಿ ಪ್ರವೇಶ ಪಡೆದ ನೇತ್ರಾವತಿಯ ಜೀವನದ ವಿಚಾರಗಳು, ಆಕೆ ಪೂರ್ಣಚಂದ್ರನಿಗೆ ಪರಿಚಯವಾದಾಗಿನಿಂದ ನಡೆದ ಸನ್ನಿವೇಶಗಳು-ಮಾತುಕಥೆಗಳು, ಅವಳ ಜೀವನದ ದುರ್ಘಟನೆ, ಕೊನೆಯಲ್ಲಿ ಬರುವ ಅನಿರೀಕ್ಷಿತ ತಿರುವುಗಳು, ಇತ್ಯಾದಿಗಳನ್ನು ಈ ಕಾದಂಬರಿ ಸವಿಸ್ತಾರವಾಗಿ ಜೋಡಿಸಿಕೊಟ್ಟಿದೆ.

ಒಟ್ಟಿನಲ್ಲಿ “ಎರಡನೇ ದೇವರು” ಕೃತಿಯನ್ನು ಮನಮುಟ್ಟಿ ಓದಿದಾಗ ಶೆಟ್ಟಿಗಾರರ ಪ್ರಯತ್ನಕ್ಕೆ ಸಾಥರ್ಕತೆ ನೀಡಿದಂತಾಗುತ್ತದೆ. ಇಂತಹ ಕೃತಿಯನ್ನು ಸಾರಸ್ವತಲೋಕಕ್ಕೆ ನೀಡಿದ ರಮೇಶ್‌ ಶೆಟ್ಟಿಗಾರರಿಗೆ ಧನ್ಯವಾದಗಳನ್ನು ಹೇಳೋಣ.

ಬಿ.ಎನ್.ಹರೀಶ್‌, ಬೋಳೂರು

Related Articles

Back to top button