ಕರಾವಳಿ

ಮಂಗಳೂರು: ಪಾಠ ಹೇಳುವ ಶಿಕ್ಷಕಿ ಹಿಂದೂ ಧರ್ಮ, ಶ್ರೀರಾಮ,ಮೋದಿ ಬಗ್ಗೆ ಅವಹೇಳನ ಆರೋಪ; ಶಾಲೆ ಎದುರು ಸೇರಿದ ಪೋಷಕರು ಆಕ್ರೋಶ

Views: 90

ಮಂಗಳೂರು: ನಗರದ ಸೇಂಟ್ ಜೆರೋಸಾ ಇಂಗ್ಲಿಷ್ ಮಾಧ್ಯಮ ಶಾಲೆಯ ಶಿಕ್ಷಕಿಯೊಬ್ಬರು ಶ್ರೀರಾಮ‌ ಹಾಗೂ ಹಿಂದೂ ಧರ್ಮದ‌ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು, ಬಜರಂಗ ದಳದ ಕಾರ್ಯಕರ್ತರು ಶಾಲೆಯ ಬಳಿ ಸೇರಿ  ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕಿ ಜೊತೆ ಮಾತನಾಡಲು ಅವಕಾಶ ನೀಡಬೇಕು ಎಂದು ಪ್ರತಿಭಟನೆ ನಿರತರು ಆಗ್ರಹಿಸಿದ್ದಾರೆ.ಇದಕ್ಕೆ ಅವಕಾಶ ನೀಡದೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ಶಾಲೆಯಲ್ಲಿ ಶಿಕ್ಷಕಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಬಗ್ಗೆ ಇದುವರೆಗೂ ಇಂತಹ ಆರೋಪ ಕೇಳಿ ಬಂದಿಲ್ಲ.‌ ಆದರೂ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕಿಯನ್ನು ಮಾತನಾಡಿಸಿ ನಿಜಾಂಶ ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.

ಶ್ರೀರಾಮ‌ ದೇವರ ಬಗ್ಗೆ ಅವಹೇಳನಕಾರಿಯಾಗಿ ಶಿಕ್ಷಕಿ ಮಾತನಾಡಿದ್ದಾರೆ. ಹಿಂದೂ ಧರ್ಮದ ಘನತೆಗೆ ಚ್ಯುತಿ ಬರುವಂತಹ ಮಾತುಗಳನ್ನು ಶಿಕ್ಷಕಿ ಆಡಿದ್ದಾರೆ ಎಂದು ಮಗಳು ಮನೆಯಲ್ಲಿ ತಿಳಿಸಿದ್ದಾಳೆ.‌ ಒಂದು ತಿಂಗಳ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು. ತರಗತಿಯಲ್ಲಿ ನರೇಂದ್ರ ಮೋದಿ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಮಗಳು ದೂರಿದ್ದಾಳೆ ಎಂದು ವಿದ್ಯಾರ್ಥಿನಿಯ ಪೋಷಕಿ ಕವಿತಾ ಆರೋಪಿಸಿದರು.

ಮಗಳು ಹೂ ಮುಡಿದುಕೊಂಡು ಹೋಗಿದ್ದಕ್ಕೂ ಹಿಂದೊಮ್ಮೆ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಪೋಷಕಿ ಜ್ಯೋತಿ ದೂರಿದರು.

ಶಿಕ್ಷಕಿ ಜೊತೆ ಮಾತನಾಡಲು ಅನುವು ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದರು. ಆದರೆ, ಪೊಲೀಸರು ಅವಕಾಶ ಕಲ್ಪಿಸಲಿಲ್ಲ.

ದಕ್ಷಿಣ ಠಾಣೆಯ ಇನ್ಸ್‌ಪೆಕ್ಟರ್ ಗುರುರಾಜ್, ಪ್ರಕರಣದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸೋಮವಾರ ಶಾಲೆಯಲ್ಲಿ ಸಭೆ ನಡೆಸಲಿದ್ದಾರೆ. ಶಿಕ್ಷಕಿಯ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಶಾಲಾ ಆಡಳಿತ ಮಂಡಳಿ ಮೂರು ದಿನಗಳ ಕಾಲಾವಕಾಶ ಕೇಳಿದೆ. ಶಿಕ್ಷಕಿ ತಪ್ಪೆಸಗಿದ್ದು ಬಿಇಒ ವಿಚಾರಣೆ ವೇಳೆ ಸಾಬೀತಾದರೆ ಖಂಡಿತಾ ಕ್ರಮ ವಹಿಸಲಿದ್ದೇವೆ ಎಂದು ಪೋಷಕರಿಗೆ ತಿಳಿಸಿದರು.

ಶಾಲೆಯಲ್ಲಿ ಈ ಬೆಳವಣಿಗೆ ನಡೆದ ಬಳಿಕ ಶಿಕ್ಷಣ ಇಲಾಖೆಯೂ ನಿಗಾ ವಹಿಸಿದೆ. ಡಿಡಿಪಿಐ ಸೂಚನೆ ಮೇರೆಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಾಲೆಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯರ ಜೊತೆ ಚರ್ಚಿಸಿದರು.

‘ಮುಖ್ಯೋಪಾಧ್ಯಾಯರು ನೀಡಿದ ಉತ್ತರದಿಂದ ಪೋಷಕರು ತೃಪ್ತಿರಾಗಿಲ್ಲ. ಹಾಗಾಗಿ ಬಿಇಒ ಅವರು ಸೋಮವಾರ ಶಾಲೆಗೆ ತೆರಳಿ ವಿಚಾರಣೆ ನಡೆಸಲಿದ್ದಾರೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ‌ ಮಾಜಿ ಸದಸ್ಯ ಐವನ್ ಡಿಸೋಜ ಅವರು ಶಾಲೆಗೆ ಭೇಟಿ ನೀಡಿ ಮುಖ್ಯೋಪಾಧ್ಯಾರ ಜೊತೆ ಈ ಬೆಳವಣಿಗೆ ಬಗ್ಗೆ ಚರ್ಚಿಸಿದರು. ಐವನ್ ಅವರು ಹೊರಡುವಾಗ ವಿದ್ಯಾರ್ಥಿಗಳ ಪೋಷಕರು ಹಾಗೂ ಬಜರಂಗದಳದ ಕಾರ್ಯಕರ್ತರು ಅವರ ಕಾರನ್ನು ಸುತ್ತುವರಿದರು. ಪೊಲೀಸರು ಅವರನ್ನು ಚದುರಿಸಿದರು.

ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರ ಬಗ್ಗೆ ಸೇಂಟ್ ಜೆರೋಸಾ ಶಾಲೆಯ ಶಿಕ್ಷಕಿ ಅವಹೇಳನಕಾರಿ ರೀತಿಯಲ್ಲಿ ಬೋಧಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯವಾಹ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.

 

 

Related Articles

Back to top button