ಇತರೆ

ಬೀದರ್‌ನಲ್ಲಿ ಬೆಚ್ಚಿ ಬೀಳಿಸಿದ ಘಟನೆ..!! ಎಟಿಎಂಗೆ ಹಣ ತುಂಬಲು ತಂದ ₹93 ಲಕ್ಷ ದರೋಡೆ 

Views: 220

ಕನ್ನಡ ಕರಾವಳಿ ಸುದ್ದಿ: SBI ಸೆಕ್ಯೂರಿಟಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ₹93 ಲಕ್ಷ ದರೋಡೆ ಮಾಡಿದ ಘಟನೆ ಬೀದರ್ ನಲ್ಲಿ ಹಾಡಹಗಲೇ ನಡೆದಿದೆ.

ಬೆಳಗ್ಗೆ 11.30ರ ಸಮಯದಲ್ಲಿ ಬೀದರ್ ಎಸ್‌ಬಿಐ ಕೇಂದ್ರ ಕಚೇರಿ ಮುಂಭಾಗ ಹಾಡಹಗಲೇ ಎಟಿಎಂಗೆ ಹಣ ಹಾಕಲು ಪಿಎಸ್ಸಿ ವಾಹನದಲ್ಲಿ ಬಂದಿದ್ದ ಇಬ್ಬರು ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿದೆ. ಎಟಿಎಂ ಹಣ ಸಾಗಿಸುವ ವಾಹನದ ಡೋರ್‌ ತೆಗೆಯುತ್ತಿದ್ದಂತೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹೊಂಚು ಹಾಕಿ ಕಣ್ಣಿಗೆ ಖಾರದಪುಡಿ ಎರಚಿ 5 ಸುತ್ತು ಗುಂಡಿನ ದಾಳಿ ನಡೆಸಿ, 93 ಲಕ್ಷ ಇದ್ದ ಹಣದ ಬಾಕ್ಸ್ ಎತ್ತಲು ಸಾಧ್ಯವಾಗದಿದ್ದರೂ ಎದ್ದು ಬಿದ್ದು ಕೊನೆಗೂ ಬಾಕ್ಸ್ ಎತ್ತಿ ಬೈಕ್‌ನಲ್ಲಿಟ್ಟುಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಸಿಎಂಎಸ್‌ ಏಜೆನ್ಸಿಯ ವೆಂಕಟಗಿರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಸಿಬ್ಬಂದಿ ಶಿವಕುಮಾರ್ ಹೈದ್ರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ಷಣಾರ್ಧದಲ್ಲಿ ಈ ಘಟನೆ ನಡೆದು ಹೋಗಿದ್ದು ಸ್ಥಳೀಯರನ್ನು ಆತಂಕಕ್ಕಿಡುಮಾಡಿದೆ. ಗುಂಡಿನ ದಾಳಿ ವೇಳೆ ಜನಸಂದಣಿ ಇರುವ ಶಿವಾಜಿ ಚೌಕ್‌ ಬಳಿ ಸಾರ್ವಜನಿಕರು ಏನು ಮಾಡಬೇಕೆಂದು ತೋಚದೆ ಭಯಭೀತರಾದರೆ, ಇನ್ನೂ ಕೆಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಘಟನಾ ಸ್ಥಳದಲ್ಲಿ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನ ದಳ ಪರಿಶೀಲನೆ ನಡೆಸಿದೆ. ಸ್ಥಳಕ್ಕೆ ಭೇಟಿ ನೀಡಿದ ಕಲಬುರಗಿ ಡಿಐಜಿ ಅಜಯ್ ಹಿಲೋರಿ ಪ್ರಕರಣದ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದಾರೆ. ಮೂರು ತಂಡಗಳನ್ನು ರಚಿಸಿ ಹಣ ಹೊತ್ತೊಯ್ದ ದಾಳಿಕೋರರಿಗೆ ಪೊಲೀಸರು ಬಲೆ ಬೀಸಿದ್ದಾರೆ.

 

Related Articles

Back to top button