ರಾಜಕೀಯ

ಬಿಜೆಪಿಯಿಂದ ಮೇನಕಾ ಗಾಂಧಿಗೆ ಟಿಕೆಟ್, ವರುಣ್ ಗಾಂಧಿಗೆ ಟಿಕೆಟ್ ಮಿಸ್, ಕಾಂಗ್ರೆಸ್‌ ಆಹ್ವಾನ..!

Views: 76

ಉತ್ತರ ಪ್ರದೇಶದ ಪಿಲಿಭಿತ್‌ನ ಹಾಲಿ ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. ಪಕ್ಷವು ಅವರ ಬದಲಿಗೆ ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಅವರನ್ನು ಹೆಸರು ಘೋಷಣೆ ಮಾಡಿದ್ದು, ಕೇಸರಿ ಟಿಕೆಟ್ ಕೈತಪ್ಪಿದ ಕಾರಣ ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸದೇ ಇರಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿಯು ತನ್ನ ಐದನೇ ಅಭ್ಯರ್ಥಿಗಳ ಪಟ್ಟಿಯಲ್ಲಿ, ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ ವರುಣ್ ಗಾಂಧಿಯನ್ನು ಕೈಬಿಟ್ಟಿತು. ಆದರೆ, ಉತ್ತರ ಪ್ರದೇಶದ ಸುಲ್ತಾನ್‌ಪುರದಿಂದ ಅವರ ತಾಯಿ ಮೇನಕಾ ಗಾಂಧಿ ಅವರಿಗೆ ಟಿಕೆಟ್ ನೀಡಿದೆ. 2021ರಲ್ಲಿ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಜೀತನ್ ಪ್ರಸಾದ ಅವರಿಗೆ ವರುಣ್ ಗಾಂಧಿ ಬದಲಿಗೆ ಪಿಲಿಭಿತ್‌ನಿಂದ ಟಿಕೆಟ್ ನೀಡಲಾಯಿತು.

ಬಿಜೆಪಿ ನಡೆಯಿಂದ ನೊಂದಿರುವ ವರುಣ್, ನಾಮಪತ್ರ ಸಲ್ಲಿಸಲು ಪಿಲಿಭಿತ್‌ ಕ್ಷೇತ್ರಕ್ಕೆ ಬರುವುದಿಲ್ಲ ಎನ್ನಲಾಗಿದೆ. ‘ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’ ಎಂದು ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ವರುಣ್ ಗಾಂಧಿ ತಮ್ಮ ಮುಂದಿನ ಚುನಾವಣಾ ನಡೆಗಳ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

44 ವರ್ಷದ ಬಿಜೆಪಿ ನಾಯಕ ಇತ್ತೀಚೆಗೆ ತನ್ನ ಸಹಚರರ ಮೂಲಕ ನಾಲ್ಕು ಸೆಟ್ ನಾಮಪತ್ರಗಳನ್ನು ಖರೀದಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಪಿಲಿಭಿತ್‌ನ ಪ್ರತಿ ಹಳ್ಳಿಯಲ್ಲಿ ಎರಡು ವಾಹನಗಳು ಮತ್ತು 10 ಮೋಟಾರ್‌ಸೈಕಲ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಅವರ ಎಲ್ಲ ಪಕ್ಷದ ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಕಾಂಗ್ರೆಸ್ ನಾಯಕ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಮಾರ್ಚ್ 27 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ವರುಣ್ ಗಾಂಧಿ ಇನ್ನೂ ನಾಮಪತ್ರ ಸಲ್ಲಿಸದ ಕಾರಣ, ಅವರು ಸ್ಪರ್ಧಿಸುವುದಿಲ್ಲ ಎಂಬ ಊಹಾಪೋಹ ಹೆಚ್ಚಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಹಲವು ಸಂದರ್ಭಗಳಲ್ಲಿ ಟೀಕಿಸಿದ ನಂತರ ವರುಣ್ ಗಾಂಧಿ, ಬಿಜೆಪಿಯ ವಿರುದ್ಧವಾಗಿ ನಿಂತಿದ್ದಾರೆ ಎಂದು ಆರೋಪಿಸಲಾಗಿದೆ.

Related Articles

Back to top button