ಪುಷ್ಪ-2 ಚಿತ್ರ ವೀಕ್ಷಣೆಗೆ ನೂಕು, ನುಗ್ಗಲು ಕಾಲ್ತುಳಿತದಿಂದ ಮಹಿಳೆ ಸಾವು ;ಹಲವರಿಗೆ ಗಾಯ

Views: 152
ಹೈದರಾಬಾದ್: ಇಲ್ಲಿನ ಆರ್ಟಿಸಿ ರಸ್ತೆಯಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ –2 : ದಿ ರೂಲ್ನ ಪ್ರಥಮ ಪ್ರದರ್ಶನದ ವೇಳೆ ಅಭಿಮಾನಿಗಳ ನೂಕು ನುಗ್ಗಲು ಹಾಗು ಕಾಲ್ತುಳಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದು ಹಲವರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮಧ್ಯರಾತ್ರಿ ಪ್ರೀಮಿಯರ್ ಪ್ರದರ್ಶನದ ವೇಳೆ ದುರಂತ ಘಟನೆ ನಡೆದಿದ್ದು ಪ್ರಮುಖ ತಾರೆಯ ಆಗಮನದ ನಂತರ ಉಂಟಾದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದರು ಮತ್ತು ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.
ಪ್ರದರ್ಶನಕ್ಕೂ ಮುನ್ನ ಭಾರೀ ಜನಸಮೂಹ ಚಿತ್ರಮಂದಿರದ ಮುಂದೆ ಜಮಾಯಿಸಿತ್ತು. ನೂಕುನುಗ್ಗಲಿನ ಪರಿಸ್ಥಿತಿ ಸೃಷ್ಟಿಸಿತು. ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಕಾತರದಿಂದ ಅಭಿಮಾನಿಗಳು ನಟ ಆಗಮಿಸಿದ ತಕ್ಷಣ ಪ್ರವೇಶದ್ವಾರದ ಕಡೆಗೆ ಧಾವಿಸಿದರು. ಜನರನ್ನು ನಿಯಂತ್ರಿಸಲು ನಿಯೋಜನೆಗೊಂಡ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದರು. ಇದರಿಂದ ಕಾಲ್ತುಳಿತ ಉಂಟಾಗಿ ಅವಘಡ ಸಂಭವಿಸಿದೆ
ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಗೊಂದಲದಲ್ಲಿ ಮೃತಪಟ್ಟ ಮಹಿಳೆಯನ್ನು ದಿಲ್ಸುಖ್ನಗರದ ನಿವಾಸಿ ರೇವತಿ ಎಂದು ಗುರುತಿಸಲಾಗಿದೆ. ಪತಿ ಭಾಸ್ಕರ್ ಮತ್ತು ಅವರ ಇಬ್ಬರು ಮಕ್ಕಳಾದ ತೇಜ್ (9) ಮತ್ತು ಸಾನ್ವಿಕಾ (7) ಅವರೊಂದಿಗೆ ಪುಷ್ಪ 2ರ ಪ್ರೀಮಿಯರ್ ಶೋ ವೀಕ್ಷಿಸಲು ಬಂದಿದ್ದರು. ಗುಂಪು ಗೇಟ್ ಮುರಿದ ನಂತರ, ಗಲಾಟೆಯ ನಡುವೆ ರೇವತಿ ಮತ್ತು ಅವರ ಮಗ ತೇಜ್ ಪ್ರಜ್ಞೆ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ
”39 ವರ್ಷದ ಸಂತ್ರಸ್ತೆ ರೇವತಿ, ಸಂಧ್ಯಾ ಚಿತ್ರಮಂದಿರದಲ್ಲಿ ಮೂರ್ಛೆ ಹೋದರು, ನಂತರ ಆಕೆಯನ್ನು ಚಿಕಿತ್ಸೆಗಾಗಿ ದುರ್ಗಾ ಬಾಯಿ ದೇಶಮುಖ ಆಸ್ಪತ್ರೆಗೆ ಕರೆತರಲಾಯಿತು” ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ಧಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ತೇಜ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇಗಂಪೇಟೆಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಸೇರಿದಂತೆ ಇತರ ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದುರ್ಗಾಬಾಯಿ ದೇಶಮುಖ ಆಸ್ಪತ್ರೆಯಿಂದ ಗಾಂಧಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.