ಪುತ್ರನಿಗೆ ಹಾವೇರಿ ಟಿಕೆಟ್ ಸಿಗದಿದ್ದರೆ ಶಿವಮೊಗ್ಗದಿಂದ ಸ್ಪರ್ಧೆ: ಈಶ್ವರಪ್ಪ

Views: 149
ಶಿವಮೊಗ್ಗ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸುವೆ. ಅಲ್ಲಿ ಓಡಾಡಿ ಗೆಲ್ಲಿಸಿಕೊಂಡು ಬರುವೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಭರವಸೆ ಕೊಟ್ಟ ಕಾರಣಕ್ಕೆ ಪುತ್ರ ಕಾಂತೇಶನನ್ನು ಅಲ್ಲಿಗೆ ಕಳುಹಿಸಿದ್ದೆ. ಈಗಲೂ ಹಾವೇರಿಯಿಂದ ಪುತ್ರನಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಪುತ್ರನಿಗೆ ಟಿಕೆಟ್ ಸಿಗದೇ ಇದ್ದಲ್ಲಿ ಶುಕ್ರವಾರ ಶಿವಮೊಗ್ಗದಲ್ಲಿ ಬೆಂಬಲಿಗರು ಸಭೆ ಕರೆದಿದ್ದು, ಅಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ಮುಂದುವರೆಯುವೆ ಎಂದು ಹೇಳಿದರು.
ಪುತ್ರನಿಗೆ ಟಿಕೆಟ್ ಪಡೆಯುವುದರ ಹಿಂದೆ ಬರೀ ನನ್ನ ರಾಜಕೀಯ ಭವಿಷ್ಯ ಅಡಗಿಲ್ಲ. ಬದಲಿಗೆ ಬಿಜೆಪಿಯ ಭವಿಷ್ಯ ಅಡಗಿದೆ. ಪಕ್ಷ ಉಳಿಸುವ ನಿಟ್ಟಿನಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವ ಕೆಲಸವೂ ಇದರ ಹಿಂದೆ ಇದೆ ಎಂದರು
ಹಾವೇರಿ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುವುದಿಲ್ಲ. ಬೆಂಬಲಿಗರ ಒತ್ತಾಯವೂ ಇರುವುದರಿಂದ ಅಗತ್ಯ ಬಿದ್ದರೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವೆ ಎಂದು ಹೇಳಿದರು.