ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರಾಜಾತಿಥ್ಯ ಪ್ರಕರಣ: 7 ಜೈಲು ಸಿಬ್ಬಂದಿ ಅಮಾನತು

Views: 55
ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ದೊರೆಯುತ್ತಿರುವ ಫೊಟೋ, ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸರ್ಕಾರ ಜೈಲಿನ 7 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿದೆಯಲ್ಲದೆ, ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯದ ಬೇರೆ ಜೈಲಿಗೆ ಸ್ಥಳಾಂತರಿಸಲು ಮುಂದಾಗಿದೆ.
ನಟ ದರ್ಶನ್ ಜೈಲಿನಲ್ಲಿ ಕುಳಿತು ರೌಡಿಶೀಟರ್‌ಗಳ ಜತೆ ಕಾಫಿ ಕುಡಿಯುತ್ತಾ, ಧೂಮಪಾನ ಮಾಡುತ್ತಿರುವ ಫೊಟೋ ನಿನ್ನೆ ವೈರಲ್ ಆಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿ ಆರೋಪಿಗಳಿಗೆಲ್ಲಾ ಈ ರೀತಿ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವುದಕ್ಕೂ ಆಕ್ಷೇಪಗಳು ವ್ಯಕ್ತವಾಗಿದ್ದವು.
ಈ ಫೊಟೋ ವೈರಲ್ ಆಗುತ್ತಿದ್ದಂತೆಯೇ ಇದನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಇಲಾಖೆ ಈ ಪ್ರಕರಣದ ತನಿಖೆಗೆ ಆದೇಶಿಸಿ ಬಂಧಿಖಾನೆಯ ಜೈಲರ್‌ಗಳು, ಉಪ ಜೈಲರ್‌ಗಳು ಸೇರಿದಂತೆ 7 ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿದೆ.
ನಟ ದರ್ಶನ್ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ 7 ಅಧಿಕಾರಿಗಳನ್ನು ಅಮಾನತ್ತು ಮಾಡಿರುವ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿ, ನಟ ದರ್ಶನ್ ಅವರಿಗೆ ಈ ರೀತಿಯ ರಾಜಾತಿಥ್ಯ ನೀಡಿರುವುದು ತಪ್ಪು. ಈ ರೀತಿಯ ಘಟನೆ ನಡೆಯಬಾರದಿತ್ತು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಕ್ರಮ ವಹಿಸುತ್ತೇವೆ. ಸದ್ಯ ಪರಪ್ಪನ ಅಗ್ರಹಾರದ 7 ಜೈಲು ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದೇವೆ. ಮುಂದೆ ತನಿಖೆ ನಡೆಸಿ ಜೈಲಿನ ಸೂಪರ್‌ಡೆಂಟ್ ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಜೈಲಿನ ಮೇಲಾಧಿಕಾರಿಗಳು ಭಾಗಿಯಾಗಿರುವುದು ಖಚಿತಪಟ್ಟರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೆ, ಅವರನ್ನು ಬೇರೆಡೆ ವರ್ಗಾವಣೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಈ ಘಟನೆಯ ಬಗ್ಗೆ ನಿನ್ನೆ ಸಂಜೆ 4 ಗಂಟೆಗೆ ತಮಗೆ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಪೊಲೀಸ್ ಮಹಾನಿರ್ದೇಶಕರು, ಬಂಧಿಖಾನೆ ಮಹಾನಿರ್ದೇಶಕರಿಗೆ ಮಾತನಾಡಿ ತನಿಖೆಗೆ ಸೂಚನೆ ಕೊಟ್ಟಿದ್ದೆ. ಅದರಂತೆ ಅವರು ಅಧಿಕಾರಿಗಳನ್ನು ಕಳುಹಿಸಿ ಮಧ್ಯರಾತ್ರಿವರೆಗೂ ತನಿಖೆ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕಾರಾಗೃಹ ಮಹಾನಿರ್ದೇಶಕರಾದ ಮಾಲಿನಿ ಕೃಷ್ಣಮೂರ್ತಿಯವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಜೈಲಿನಲ್ಲಿ ಈ ರೀತಿಯ ಪ್ರಕರಣ ನಡೆಯಬಾರದಿತ್ತು. ಇದು ನಡೆದಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ ಗೃಹ ಸಚಿವರು, ಈ ಹಿಂದೆ ಜೈಲಿನಲ್ಲಿ ದರ್ಶನ್‌ಗೆ ಚಿಕನ್ ಬಿರಿಯಾನಿ ಕೊಟ್ಟಿದ್ದರು ಎಂಬ ಬಗ್ಗೆ ನಾನು ಆ ರೀತಿ ಕೊಟ್ಟಿಲ್ಲ ಎಂದು ಹೇಳಿದ್ದೆ. ಆದರೆ ಈಗ ನಡೆದಿರುವ ಘಟನೆಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಈ ಘಟನೆ ಆಗಬಾರದಿತ್ತು ಎಂದರು.
ಜೈಲಿನಲ್ಲಿ ಫೋನ್ ಬಳಕೆಯನ್ನು ತಡೆಯಲು ಜಾಮರ್ ಹಾಕಿ ಅದರ ಸಾಮರ್ಥ್ಯವನ್ನು ಹೆಚ್ಚಿಸಲಾಗಿತ್ತು. ಇದರಿಂದ ಜೈಲಿನ ಪಕ್ಕದ ಪ್ರದೇಶಗಳಿಗೆ ಮೊಬೈಲ್ ಸಿಗ್ನಲ್ ಸಿಗದೆ ತೊಂದರೆಯಾಗುತ್ತಿತ್ತು. ಹೀಗಾಗಿ ಸದ್ಯ ಫ್ರೀಕ್ವೆನ್ಸಿ ಕಡಿಮೆ ಮಾಡಲಾಗಿದೆ. ಏನೇ ಇರಲಿ, ಜೈಲಿನಲ್ಲಿ ಯಾರು ಈ ಫೋಟೋ ತೆಗೆದರು, ಯಾರ ಮೊಬೈಲ್‌ನಿಂದ ತೆಗೆದಿದ್ದಾರೆ ಎಲ್ಲವೂ ಮುಖ್ಯವಾಗಲಿದೆ. ಎಲ್ಲದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದರು.
ನಟ ದರ್ಶನ್‌ಗೆ ರಾಜಾತಿಥ್ಯ ನೀಡಿರುವುದು, ಬಂಧಿಖಾನೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವುದು, ದರ್ಶನ್ ಜೈಲಿನಿಂದಲೇ ವಿಡಿಯೋದಲ್ಲಿ ಮಾತನಾಡಿರುವುದು ಎಲ್ಲದರ ಬಗ್ಗೆಯೂ ತನಿಖೆ ನಡೆಸುತ್ತೇವೆ. ಯಾರೇ ಇರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮುಲಾಜು, ದಾಕ್ಷಿಣ್ಯ ಇಲ್ಲ ಎಂದರು.
ಜೈಲಿನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಯಾರೂ ಒತ್ತಡ ತಂದಿಲ್ಲ. ತಂದರೂ ಅದು ನನ್ನ ಬಳಿ ನಡೆಯಲ್ಲ. ಕಾನೂನಿನಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.
ಅಮಾನತ್ತುಗೊಂಡ ಜೈಲು ಅಧಿಕಾರಿಗಳು
ಜೈಲರ್‌ಗಳಾದ ಶರಣ ಬಸವ ಅಮೀನಗಡ, ಪ್ರಭು ಎಸ್. ತಳವಾರ್
ಸಹಾಯಕ ಜೈಲರ್‌ಗಳಾದ ಎಸ್.ಎಲ್. ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್
ಜೈಲಿನ ಹೆಡ್ ವಾರ್ಡರ್‌ಗಳಾದ ವೆಂಕಪ್ಪ ಕೊರಟ್ಟಿ, ಸಂಪತ್‌ಕುಮಾರ್
ವಾರ್ಡರ್ ಬಸಪ್ಪ