ಧರ್ಮಸ್ಥಳ ಕೇಸ್: ಎಸ್ಐಟಿ ಮುಂದೆ ಹಾಜರಾದ ಮತ್ತೋರ್ವ ದೂರುದಾರ

Views: 243
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ಸುತ್ತಮುತ್ತಲಿನ ಕಾಡಿನಲ್ಲಿ ಹಾಗೂ ನೇತ್ರಾವತಿ ನದಿ ತಟದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಅಪರಿಚಿತ ವ್ಯಕ್ತಿ ನೀಡಿರುವ ದೂರಿನ ಆಧಾರದ ಮೇಲೆ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆ ಮಾಡುತ್ತಿದ್ದು, ಮತ್ತೋರ್ವ ವ್ಯಕ್ತಿ ಎಸ್ಐಟಿ ಮುಂದೆ ಹಾಜರಾಗಿದ್ದಾನೆ.
ಅನಾಮಿಕ ವ್ಯಕ್ತಿ ಧರ್ಮಸ್ಥಳದ ಕಾಡಿನಲ್ಲಿ ತೋರಿಸಿದ 13 ಸ್ಥಳಗಳ ಪೈಕಿ ಈಗಾಗಲೇ 10 ಕಡೆ ಉತ್ಖನನ ನಡೆಸಲಾಗಿದೆ. ಅದರಲ್ಲಿ ಒಂದು ಕಡೆ ಮಾತ್ರ ಮೊಳೆಗಳು ಸಿಕ್ಕಿವೆ. ಉಳಿದ 3 ಕಡೆ ಸೋಮುವಾರ ಉತ್ಖನನ ನಡೆಯಲಿದ್ದು, ಈ ಕೇಸ್‌ನಲ್ಲಿ ಮತ್ತೊಬ್ಬ ದೂರುದಾರ ಎಸ್‌ಐಟಿ ಮುಂದೆ ಹಾಜರಾಗಿ ದೂರು ನೀಡಲು ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.
ಬುರುಡೆ ರಹಸ್ಯ ಬೇಧಿಸುತ್ತಿರುವ ಎಸ್‌ಐಟಿ ತಂಡದ ತನಿಖೆಯ ಪ್ರಕ್ರಿಯೆ ನಡುವೇ ಪ್ರಕರಣವು ಇದೀಗ ಮಹತ್ವದ ತಿರುವು ಪಡೆದಿದೆ. ಜಯಂತ್ ಟಿ ಎಂಬುವವರು ದೂರು ನೀಡಲು ಮುಂದಾಗಿದ್ದಾರೆ.
ಶನಿವಾರ ಸಂಜೆ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದ ಪದ್ಮಲತಾ ಕೊಲೆ ಪ್ರಕರಣದ ಸಂಬಂಧಿ ಜಯಂತ್ ಟಿ. ಎಂಬಾತ, ಧರ್ಮಸ್ಥಳ ಗ್ರಾಮದಲ್ಲಿ ಸುಮಾರು 12 ವರ್ಷಗಳ ಹಿಂದೆ ಕೊಲೆ ನಡೆದಿರುವುದು ನಾನು ಕಂಡಿದ್ದೇನೆ. ಅಂದು ದೂರು ನೀಡಲು ಭಯವಿತ್ತು. ಇಂದು ಎಸ್‌ಐಟಿ ತಂಡದ ಮೇಲೆ ವಿಶ್ವಾಸವಿದ್ದು, ದೂರು ನೀಡಲು ಬಂದಿರುವೆ. ಎಸ್‌ಐಟಿ ಅಧಿಕಾರಿಗಳು ಆ. 4ರಂದು ಸೋಮವಾರ ಬರಲು ಹೇಳಿದ್ದು ದೂರು ನೀಡುವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾನೆ.






