ಪ್ರವಾಸೋದ್ಯಮ

ದೇಶದ ಎರಡನೇ ಅತಿದೊಡ್ಡ ಸಿಗಂದೂರು ಕೇಬಲ್ ಆಧಾರಿತ ಸೇತುವೆಯ ವಿಶೇಷತೆ 

Views: 260

ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಂಬಾರಗೋಡ್ಲು – ಕಳಸವಳ್ಳಿ ಸೇತುವೆಯನ್ನು ಕೇಂದ್ರ ಸಚಿವೆ ನಿತಿನ್‌ ಗಡ್ಕರಿ ಅವರು ಲೋಕಾರ್ಪಣೆ ಮಾಡಿದ್ದಾರೆ.

ಸುಮಾರು 2.1 ಕಿಲೋಮೀಟರ್ ಉದ್ದವಿರುವ ಈ ಸೇತುವೆ ದೇಶದ ಎರಡನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ ಆಗಿದೆ. ಈ ಸೇತುವೆಯು ಸಾಗರ ಮತ್ತು ಸಿಗಂದೂರು ನಡುವಿನ ಪ್ರಯಾಣದ ಅವಧಿಯನ್ನು 2 ಗಂಟೆಗಳಷ್ಟು ಕಡಿಮೆ ಮಾಡಲಿದೆ. ಜತೆಗೆ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಗಳಿಗೆ ಉತ್ತೇಜನ ನೀಡಲಿದೆ.

ಲಿಂಗನಮಕ್ಕಿ ಜಲಾಶಯದ ನಿರ್ಮಾಣದಿಂದ 1960ರ ದಶಕದಲ್ಲಿ ಸಾಗರ ತಾಲೂಕಿನ ಹಲವು ಗ್ರಾಮಗಳು ಶರಾವತಿ ಹಿನ್ನೀರಿನಿಂದ ಸಂಪರ್ಕ ಕಳೆದುಕೊಂಡಿದ್ದವು. ಈ ಸೇತುವೆಯ ಬೇಡಿಕೆ ಆರಂಭದಿಂದಲೂ ಇದ್ದರೂ, 2018ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಉದ್ಘಾಟನೆ ಮಾಡಿದ್ದಾರೆ. ಸಿಗಂದೂರು ಸೇತುವೆಯ ವಿಶೇಷತೆಗಳ ಬಗ್ಗೆ ವಿವರ ಇಲ್ಲಿದೆ.

ಉದ್ದ ಮತ್ತು ವಿನ್ಯಾಸ: 2.1 ಕಿ.ಮೀ ಉದ್ದ ಮತ್ತು 16 ಮೀಟರ್ ಅಗಲವಿರುವ ಈ ಸೇತುವೆಯು 740 ಮೀಟರ್ ಕೇಬಲ್ ಆಧಾರಿತ ಸೇತುವೆ ಹೊಂದಿದೆ. ಇದು ಎಕ್ಸ್ಟ್ರಾಡೋಸ್ಟ್ ಬ್ಯಾಲೆನ್ಸ್ ಕ್ಯಾಂಟಿಲಿವರ್ ವಿನ್ಯಾಸವನ್ನು ಒಳಗೊಂಡಿದ್ದು, ಸಾಂಪ್ರದಾಯಿಕ ಸೇತುವೆಗಳಿಗಿಂತ ಹೆಚ್ಚಿನ ಸ್ಥಿರತೆಯನ್ನು ಒದಗಿಸುತ್ತದೆ.

473 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ 378.3 ಕೋಟಿ ರೂ.ಗಳನ್ನು ಸೇತುವೆಯ ನಿರ್ಮಾಣಕ್ಕೆ ಮಾತ್ರ ಬಳಸಲಾಗಿದೆ.

17 ಪಿಯರ್‌ಗಳು ಮತ್ತು ಎರಡು ಅಬಟ್‌ಮೆಂಟ್‌ಗಳನ್ನು ಬಳಸಿಕೊಂಡು ನಿರ್ಮಿಸಲಾಗಿದ್ದು, ಸಾಮಾನ್ಯ ಸೇತುವೆಗೆ 100 ಪಿಯರ್‌ಗಳ ಅಗತ್ಯವಿರುತ್ತದೆ. ಕೇಬಲ್‌ಗಳು ಡೆಕ್‌ ಲಂಬ ಭಾರವನ್ನು ಗೋಪುರಗಳಿಗೆ ವರ್ಗಾಯಿಸುತ್ತವೆ.

ಶರಾವತಿ ನದಿಯ ಭೋರ್ಗರೆವ ಪ್ರವಾಹವನ್ನು ತಡೆದುಕೊಳ್ಳಲು ಸೇತುವೆ ವಿನ್ಯಾಸಗೊಳಿಸಲಾಗಿದ್ದು, 100 ವರ್ಷಗಳ ಆಯುಷ್ಯವನ್ನು ಖಾತ್ರಿಪಡಿಸಲು ಲೋಡ್ ಟೆಸ್ಟಿಂಗ್‌ನಲ್ಲಿ 22 ಮಿಮೀ ವಿಚಲನದೊಂದಿಗೆ 100 ಟನ್ ಭಾರವನ್ನು ಯಶಸ್ವಿಯಾಗಿ ತಡೆದುಕೊಂಡಿದೆ.

ಪ್ರಯೋಜನಗಳು

ಸಾಗರದಿಂದ ಸಿಗಂದೂರಿಗೆ 80 ಕಿಮೀ ರಸ್ತೆ ಪ್ರಯಾಣವನ್ನು ಸುಮಾರು 16 ಕಿಮೀಗೆ ಇಳಿಸುವ ಮೂಲಕ 2 ಗಂಟೆಗಳಷ್ಟು ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ.

ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ಸುಗಮಗೊಳಿಸುವುದರ ಜತೆಗೆ ಕೊಲ್ಲೂರು ಮತ್ತು ಸಿಗಂದೂರು ದೇವಸ್ಥಾನಗಳನ್ನು ಸಂಪರ್ಕಿಸುತ್ತದೆ, ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ.

ಶರಾವತಿ ಹಿನ್ನೀರಿನಿಂದ ಬೇರ್ಪಟ್ಟ 40ಕ್ಕೂ ಹೆಚ್ಚು ಗ್ರಾಮಗಳಿಗೆ ಸಾಗರ ಮತ್ತು ಇತರ ಊರುಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ 60 ವರ್ಷಗಳ ದೀರ್ಘಕಾಲದ ಬೇಡಿಕೆ ಈಡೇರಿದೆ.

ದೀರ್ಘಕಾಲದಿಂದ ಬಳಸಲಾಗುತ್ತಿದ್ದ ದೋಣಿ ಸಾರಿಗೆ ವ್ಯವಸ್ಥೆಯನ್ನು ಬದಲಿಸುವುದರ ಜತೆಗೆ ತುರ್ತು ಸಂದರ್ಭಗಳಿಗಾಗಿ ದೋಣಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗುವುದು.

Related Articles

Back to top button