ಜನಮನ

ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶ, ವಾಡಿಕೆಗಿಂತ ಮಳೆ ಪ್ರಮಾಣ ತುಸು ಹೆಚ್ಚಳ!

Views: 50

ಕನ್ನಡ ಕರಾವಳಿ ಸುದ್ದಿ: ಮೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ವಾಡಿಕೆಗಿಂತ ಕೊಂಚ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು, ಸುಮಾರು ಶೇ.105ರಷ್ಟು ಮಳೆಯಾಗಲಿದೆ. ಈ ಬಾರಿಯ ಮುಂಗಾರು ಮಾರುತಗಳು, ಮೇ ಕೊನೆಯ ವಾರದಲ್ಲಿ ದಕ್ಷಿಣದ ಕೇರಳ ಪ್ರವೇಶಿಸಿ, ಸೆಪ್ಟೆಂಬರ್‌ವರೆಗೂ ಮಳೆಯಾಗಲಿದೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗದಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಎರಡು ವರ್ಷಗಳ ಹಿಂದೆ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಕರ್ನಾಟಕದಲ್ಲಿ ಕಳೆದ ವರ್ಷ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಇದೀಗ ಪ್ರಸಕ್ತ ವರ್ಷವೂ ಕಳೆದ ವರ್ಷದಂತೆ ವಾಡಿಕೆಗಿಂತ ತುಸು ಹೆಚ್ಚಾಗಲಿದೆ.

ಕರ್ನಾಟಕದಲ್ಲಿ ಕಳೆದ ಐವತ್ತು ವರ್ಷದಲ್ಲಿ ಸರಾಸರಿ ಮಳೆಯ ಪ್ರಮಾಣ 87 ಸೆ. ಮೀ ಆಗಿದ್ದು, ಈ ಬಾರಿ ಶೇ.105ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದ್ದರಿಂದ ಕಂದಾಯ ಇಲಾಖೆ ಈಗಾಗಲೇ ಮುಂಗಾರು ಮಳೆಗೆ ಸಂಬಂಧಿಸಿದಂತೆ ಸರಣಿ ಸಭೆಗಳನ್ನು ನಡೆಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ದುಪ್ಪಟ್ಟು ಸುರಿದಿದ್ದು, 49 ಸೆಂ.ಮೀ ಮಳೆಯಾಗಿದೆ. ಇದು ನಿರೀಕ್ಷಿತ 25 ಸೆಂ.ಮೀಗಿಂತ ಶೇ.98ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಮಾರ್ಚ್‌ನಿಂದ ಆರಂಭಗೊಳ್ಳುವ ಪೂರ್ವ ಮುಂಗಾರು ಮಳೆ ಜೂನ್‌ವರೆಗೂ ಮುಂದುವರಿಯಲಿದ್ದು, ಈ ಮಳೆಯಿಂದ ಉಷ್ಣಾಂಶ, ಬಿಸಿಗಾಳಿ ಹಾಗೂ ಸೆಖೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ

ಪೂರ್ವ ಮುಂಗಾರಿನ ಸಮಯದಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ವಾಡಿಕೆಯಂತೆ ಈ ಅವಧಿಗೆ 22.7 ಸೆಂ. ಮೀ. ಮಳೆಯಾಗಬೇಕು. ಆದರೆ, 43.1 ಸೆಂ.ಮೀ. ಮಳೆಯಾಗಿದೆ. ಅಂದರೆ ಶೇ.90ರಷ್ಟು ಮಳೆ ಹೆಚ್ಚಾಗಿದೆ. ದಕ್ಷಿಣ ಒಳನಾಡಿನಲ್ಲಿ 30.5 ಸೆಂ.ಮೀ. ಮಳೆಯಾಗಬೇಕು. ಆದರೆ, 62.7 ಸೆಂ.ಮೀ. ನಷ್ಟು ಮಳೆ ಸುರಿಯುವ ಮೂಲಕ ಮಳೆ ಪ್ರಮಾಣ ಶೇ.106ರಷ್ಟು ಹೆಚ್ಚಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 19.2 ಸೆಂ.ಮೀ. ಮಳೆಯಾಗಬೇಕು. ಆದರೆ, ಈ ಬಾರಿ 33.8 ಸೆಂ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.76ರಷ್ಟು ಹೆಚ್ಚುವರಿ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Related Articles

Back to top button
error: Content is protected !!