ಚಾಮರಾಜನಗರ ಮೀಸಲು ಕ್ಷೇತ್ರದಿಂದ ಕೆ.ಶಿವರಾಂ ಪತ್ನಿಗೆ ಬಿಜೆಪಿ ಟಿಕೆಟ್ ನೀಡಲು ಒತ್ತಾಯ

Views: 20
ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಶಿವರಾಂ ಅವರ ನಿಧನದ ಹಿನ್ನೆಲೆ ಪತ್ನಿ ವಾಣಿ ಶಿವರಾಂ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮುಖಂಡರು, ಬೆಂಬಲಿಗರು ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಛಲವಾಧಿ ಮಹಾಸಭಾ, ನಿವೃತ್ತ ಐಎಎಸ್ ಅಧಿಕಾರಿ, ದಿ.ಕೆ.ಶಿವರಾಂ ಅವರ ಪತ್ನಿ ವಾಣಿ ಕೆ.ಶಿವರಾಂ ಅವರಿಗೆ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದೆ.
ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಅಣಗಳ್ಳಿ ಬಸವರಾಜು, ಕಾರ್ಯಾಧ್ಯಕ್ಷ ಹಂಸರಾಜ್ ಮಾತನಾಡಿ, ಕೆ.ಶಿವರಾಂ ಅವರು ನಿವೃತ್ತಿ ನಂತರ ಕಳೆದ 10 ವರ್ಷಗಳಿಂದ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಪಕ್ಷದ ಎಲ್ಲಾ ಚುನಾವಣೆಗಳಲ್ಲಿ ಕೆಲಸ ಮಾಡಿದ್ದಾರೆ. ಈ ಬಾರಿ ಯಡಿಯೂರಪ್ಪ ಹಾಗೂ ಅನೇಕ ಮುಖಂಡರು ಕೂಡ ಕೆ.ಶಿವರಾಂ ಅವರಿಗೆ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಅಕಾಲಿಕ ಮರಣಕ್ಕೆ ಈಡಾದರು.
ಶಿವರಾಂ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಛಲವಾದಿ ಮಹಾಸಭಾದಿಂದ ಅವರ ಕುಟುಂಬದ ನೋವಿನ ಮಧ್ಯೆಯೂ ಅವರ ಪತ್ನಿ ವಾಣಿ ಶಿವರಾಂ ಅವರನ್ನು ಭೇಟಿಯಾಗಿ, ಕೆ.ಶಿವರಾಂ ಅವರ ಸ್ಥಾನವನ್ನು ನೀವು ತುಂಬಬೇಕು. ಈ ನಿಟ್ಟಿನಲ್ಲಿ ಸಕ್ರಿಯ ರಾಜಕಾರಣ ಹಾಗೂ ಸಮಾಜಸೇವೆಗೆ ಬರುವಂತೆ ಅವರನ್ನು ಒಪ್ಪಿಸಿದ್ದೇವೆ. ಕೆ. ಶಿವರಾಂ ಅವರ ಪತ್ನಿ ವಾಣಿ ಶಿವರಾಂ ಅವರಿಗೆ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಗೆಲುವು ಖಚಿತ ಎಂದು ಆಗ್ರಹಿಸಿದರು
ಮಾಜಿ ಸಚಿವ ದಿ.ಎಚ್.ಎಸ್.ಮಹದೇವಪ್ರಸಾದ್ ಅವರ ನಿಧನದ ಬಳಿಕ ಗೀತಾ ಮಹದೇವಪ್ರಸಾದ್, ಹಾಗೂ ದಿ.ಆರ್.ಧ್ರುವನಾರಾಯಣ್ ನಂತರ ಅವರ ಪುತ್ರ ದರ್ಶನ್ ಧ್ರುವನಾರಾಯನ್ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅದೇ, ಮಾದರಿಯಲ್ಲಿ ಕೆ.ಶಿವರಾಂ ಅವರ ಜನಪ್ರಿಯತೆಯಲ್ಲಿ ಅವರ ಪತ್ನಿ ವಾಣಿ ಶಿವರಾಂ ಅವರು ಅನುಕಂಪದ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಅಣಗಳ್ಳಿ ಬಸವರಾಜು ಅಭಿಪ್ರಾಯಪಟ್ಟರು.
ಈಗ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಅವರ ಪತ್ನಿ ವಾಣಿ ಶಿವರಾಂ ಅವರಿಗೆ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡಿದರೆ ಗೆಲುವು ಖಚಿತ, ಶಿವರಾಂ ಅವರು ಮಾಡಿರುವ ಜನಪರ ಕೆಲಸಗಳು ಹಾಗೂ ಅವರ ವರ್ಚಸ್ಸು ಕ್ಷೇತ್ರದಲ್ಲಿ ಅನುಕಂಪದ ಅಲೆಯಲ್ಲಿ ವಾಣಿ ಶಿವರಾಂ ಗೆಲುವು ಸಾಧಿಸಲಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರಿಗೆ ಟಿಕೆಟ್ ಕೊಡಬೇಕೆಂದು ಒತ್ತಾಯಿಸಿದ್ದಾರೆ.