ಜನಮನ

ಗ್ರಾಮ ಮಟ್ಟದಲ್ಲಿ ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು 25 ಸಾವಿರ ‘ಜನಮಿತ್ರರ’ನೇಮಕ

Views: 60

ಬೆಂಗಳೂರು,  ಕರ್ನಾಟಕ ಸರ್ಕಾರ ಬೆಂಗಳೂರು ನಗರದಲ್ಲಿ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜನರಿಗೆ ಸರ್ಕಾರಿ ಸೇವೆಗಳನ್ನು ನೀಡಲು ಜನಮಿತ್ರರನ್ನು ನೇಮಕ ಮಾಡಲಾಗುತ್ತದೆ.

ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ 25 ಸಾವಿರ ಜನಮಿತ್ರರನ್ನು ನೇಮಕ ಮಾಡಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಕೆಲಸ ನಿರ್ವಹಣೆ ಮಾಡಬಹುದು. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.

ಜನರು ವಿವಿಧ ಇಲಾಖೆಗಳ ಸೇವೆಗಳನ್ನು ಪಡೆಯಲು ಸಮಯ, ಶ್ರಮ, ಹಣ ವ್ಯಯ ಮಾಡಿಕೊಂಡು ಅಲೆದಾಡುವುದು ತಪ್ಪಿಸಲು ‘ಜನಮಿತ್ರ’ರು ನೆರವಾಗಲಿದ್ದಾರೆ. ಸರ್ಕಾರದ ಇ-ಆಡಳಿತ ಇಲಾಖೆಯ ಮೂಲಕ ಜನಮಿತ್ರರ ನೇಮಕ ನಡೆಯಲಿದೆ.

ಮಧ್ಯವರ್ತಿಗಳಿಗೆ ಕಡಿವಾಣ; ಸುಮಾರು 25 ಸಾವಿರ ‘ಜನಮಿತ್ರ’ರ ನೇಮಕದ ಬಗ್ಗೆ ಇನ್ನೂ ಪ್ರಾಥಮಿಕ ಹಂತದಲ್ಲಿ ಚರ್ಚೆಗಳು ನಡೆಯುತ್ತಿವೆ. ಸರ್ಕಾರದ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಮತ್ತು ತಾಲೂಕು ಮಟ್ಟದಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಜನಮಿತ್ರರು ನೆರವಾಗಲಿದ್ದಾರೆ.

ಇದಕ್ಕಾಗಿಯೇ ಜನಮಿತ್ರ ಎಂಬ ಮೊಬೈಲ್ ಅಪ್ಲಿಕೇಶನ್ ತಯಾರು ಮಾಡಲಾಗುತ್ತಿದೆ. ಜನಮಿತ್ರರಾಗಿ ನೇಮಕಗೊಂಡವರ ಮೊಬೈಲ್‌ಗೆ ಮಿಸ್ ಕಾಲ್ ಕೊಡುವ ಮೂಲಕ ಅವರನ್ನು ಸಂಪರ್ಕಿಸಬಹುದು. ಒಂದು ಗಂಟೆಯಲ್ಲಿ ಜನರ ಸಮಸ್ಯೆ ಏನು? ಎಂದು ಅವರು ಕೇಳುವಂತೆ ಯೋಜನೆ ರೂಪಿಸಲಾಗುತ್ತಿದೆ.

ಜನಮಿತ್ರರು ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ರಸಗೊಬ್ಬರ ಪಡೆಯಲು ಅರ್ಜಿ, ವಿವಿಧ ಲೈಸೆನ್ಸ್ ನವೀಕರಣ, ಮಣ್ಣಿನ ಪರೀಕ್ಷೆ, ಪಿಂಚಣಿಗೆ ಅರ್ಜಿ ಸಲ್ಲಿಕೆ, ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಪಡೆಯಲು ಜನರಿಗೆ ಸಹಾಯ ಮಾಡಲಿದ್ದಾರೆ.

10ನೇ ತರಗತಿ ಓದಿರುವ, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ವಾಸವಾಗಿರುವ, ಚಾಲನಾ ಪರವಾನಗಿ ಹೊಂದಿರುವ ಯುವಕ/ ಯುವತಿಯರನ್ನು ಜನಮಿತ್ರರಾಗಿ ನೇಮಕ ಮಾಡಲಾಗುತ್ತದೆ. ಈ ಸೇವೆಗಾಗಿ ಅವರಿಗೆ ವೇತನದ ಬದಲು ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಮತ್ತು ಮನೆ ಬಾಗಿಲಿಗೆ ಸೇವೆ ನೀಡಲು ಅರ್ಜಿ ಶುಲ್ಕದ ಜೊತೆ 50 ರೂ. ಶುಲ್ಕ ವಿಧಿಸಲಾಗುತ್ತದೆ. ಅರ್ಜಿ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕು. ಉಳಿದ ಮೊತ್ತ ಜನಮಿತ್ರರಿಗೆ ಹೋಗಲಿದೆ.

ಜನಮಿತ್ರ ನೇಮಕಾತಿ ಕುರಿತು ಇನ್ನೂ ಅಂತಿಮ ರೂಪುರೇಷೆ ತಯಾರಾಗಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಒಪ್ಪಿಗೆ ಪಡೆದು ಬಳಿಕ ಅಂತಿಮ ನಿಯಮಾವಳಿಗಳನ್ನು ರಚನೆ ಮಾಡಿ ಪ್ರಕಟಿಸಲಾಗುತ್ತದೆ.

Related Articles

Back to top button