ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಗೆ ಮಂತ್ರಾಲಯ ಸ್ವಾಮೀಜಿ, ಶ್ರೀಕೃಷ್ಣ ಮಠದ ಹೆಸರು ಹೇಳಿ ಆನ್‌ಲೈನ್ ವಂಚನೆ

Views: 146
ಕನ್ನಡ ಕರಾವಳಿ ಸುದ್ದಿ:ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಗೆ ಮಂತ್ರಾಲಯ ಸ್ವಾಮೀಜಿ ಮತ್ತು ಶ್ರೀಕೃಷ್ಣ ಮಠದ ಹೆಸರು ಹೇಳಿ ದುರ್ಬಳಕೆ ಮಾಡಿಕೊಂಡು ಆನ್‌ಲೈನ್ ಮೂಲಕ ವಂಚಿಸಿದ ಘಟನೆ ನಡೆದಿದೆ.
ಕ್ಯಾನ್ಸರ್‌ನಿಂದ ಬಳಲುತ್ತಿರುವ ಭಾಗ್ಯಶ್ರೀ ಅವರು ಚಿಕಿತ್ಸೆ ವೆಚ್ಚಕ್ಕೆ ಹಣಕಾಸು ನೆರವಿಗಾಗಿ ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಮನವಿ ಮಾಡಿಕೊಂಡಿದ್ದರು. ಜುಲೈ 1ರಂದು ಬೆಳಿಗ್ಗೆ ಅವರಿಗೆ ದೂರವಾಣಿ ಕರೆ ಮಾಡಿದ ಅಪರಿಚಿತನೋರ್ವ ಮಾತನಾಡಿ, ನಾನು ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ ಮಠದಿಂದ ಸ್ವಾಮೀಜಿ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. ಉಡುಪಿ ಶ್ರೀಕೃಷ್ಣ ಮಠದಿಂದ ಧನ ಸಹಾಯ ಮಾಡಲು ಹೇಳಿದ್ದು, ನಾವು ನಿಮಗೆ 2,90,000 ರೂ. ನೀಡುತ್ತೇವೆ. ಆದರೆ ಅದಕ್ಕೆ ತೆರಿಗೆಯಾಗಿ 29,900 ರೂ. ಪಾವತಿಸಬೇಕು ಎಂದು ಸೂಚಿಸಿದ್ದ. ಮಠ, ಸ್ವಾಮೀಜಿ ಅವರ ಹೆಸರು ಬಳಕೆಯಾಗಿದ್ದ ವಂಚನೆಯ ಕುರಿತು ಅರಿವೆಗೆ ಬಾರದೆ ಭಾಗ್ಯಶ್ರೀ ಅವರು 29,900 ರೂ.ಗಳನ್ನು ವರ್ಗಾಯಿಸಿದ್ದರು. ಬಳಿಕ ಮತ್ತೆ ಕರೆ ಮಾಡಿದ ವಂಚಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಪಾವತಿ ಆದ ತತ್‌ಕ್ಷಣ ಕರೆ ಮಾಡಿ ಎಂದು ಹೇಳಿದ್ದ. ಆದರೆ ಅನಂತರ ಆತನೂ ಕರೆ ಮಾಡಿಲ್ಲ, ಆತನ ಸಂಖ್ಯೆಗೂ ಕರೆ ಹೋಗುತ್ತಿಲ್ಲ. ವಂಚನೆಯ ಕುರಿತು ಅರಿವಾದ ಮಹಿಳೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಕೌಂಟ್ ಸಂಖ್ಯೆ, ದೂರವಾಣಿ ಸಂಖ್ಯೆ ಸಹಿತ ಎಲ್ಲ ವಿವರಗಳನ್ನು ಹಾಕುವವರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.