ಕೋಲಾರ ಎಡಗೈ-ಬಲಗೈ ಟಿಕೆಟ್ ಸಂಘರ್ಷ, ಹೊರಗಿನ ಅಚ್ಚರಿಯ ಅಭ್ಯರ್ಥಿಗೆ ಟಿಕೆಟ್?

Views: 56
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯೇ ಕಾಂಗ್ರೆಸ್‌ಗೆ ದೊಡ್ಡ ತಲೆನೋವು ತಂದಿದೆ. ಬಣಗಳ ಟಿಕೆಟ್ ವಾರ್ ಬಗೆಹರಿಯದ್ದರಿಂದ ಯಾರಿಗೆ ಟಿಕೆಟ್ ಎಂಬುದು ಇನ್ನು ಫೈನಲ್ ಆಗಿಲ್ಲ. ಸಚಿವ ಕೆಎಚ್ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಬೇಡವೆಂದು ವಿರೋಧಿ ನಾಯಕರು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಹೊರಗಿನವರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದಲ್ಲಿನ ಬಣ ರಾಜಕೀಯದಿಂದ ಬೇಸತ್ತಿರುವ ಹೈಕಮಾಂಡ್ ನಾಯಕರು, ಎರಡೂ ಬಣಗಳಲ್ಲಿ ಗುರುತಿಸಿಕೊಳ್ಳದಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು, . ಸಚಿವ ಕೆಎಚ್ ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಬಣಗಳ ನಡುವಿನ ತಿಕ್ಕಾಟ ಮುಂದುವರಿದಿದ್ದು, ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣರಿಗೆ ಟಿಕೆಟ್ ತಪ್ಪಿಸಲೇಬೇಕೆಂದು ಪಣ ತೊಟ್ಟಿರುವಂತಹ ನಾಯಕರು ಹೊಸ ಬೇಡಿಕೆ ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಆದರೆ, ಮುನಿಯಪ್ಪ ಕುಟುಂಬದವರಿಗೆ ಮಾತ್ರ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಅವರ ಕುಟುಂಬಕ್ಕೆ ಟಿಕೆಟ್ ನೀಡಿದರೆ 2019ರ ಫಲಿತಾಂಶ ಮರುಕಳಿಸುತ್ತದೆಂದು ನಾಯಕರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಶಾಸಕರೊಂದಿಗೆ ಸುದೀರ್ಘ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಯಕರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ. ಈ ವೇಳೆ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ವಾದವನ್ನು ಮುಂದಿಟ್ಟಿದ್ದಾರೆ.
ಮುನಿಯಪ್ಪ ಕುಟುಂಬ ಹೊರತುಪಡಿಸಿ ಯಾರಿಗೆ ಟಿಕೆಟ್ ನೀಡಿದರೂ ನಮ್ಮ ಬೆಂಬಲವಿದೆ. ಮುನಿಯಪ್ಪ ಕಾಂಗ್ರೆಸ್ ನಾಯಕರಿಗೆ ಹೆಚ್ಚು ತೊಂದರೆ ಕೊಟ್ಟಿದ್ದು, ನಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟರೆ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.
ಕೋಲಾರ ಲೋಕಸಭಾ ಕ್ಷೇತ್ರದಿಂದ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಎಡಗೈ ಸಮುದಾಯದ ಅಭ್ಯರ್ಥಿಯ ಹುಟುಕಾಟದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಅದರಂತೆ ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್‌ಎಂ ಮುನಿಯಪ್ಪ, ಬೆಂಗಳೂರಿನ ಮದನ್ ಪಾಟೀಲ್ ಸೇರಿದಂತೆ ಹೊರಗಿನವರ ಹೆಸರುಗಳು ಕೇಳಿಬರುತ್ತಿದ್ದು, ಕಾಂಗ್ರೆಸ್ ಟಿಕೆಟ್ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿನ ಬಣ ರಾಜಕೀಯದಿಂದ ಬಂಗಾರಪೇಟೆ ಶಾಸಕ ಎಸ್‌ಎನ್ ನಾರಾಯಣಸ್ವಾಮಿ ಅಂತರ ಕಾಯ್ದುಕೊಂಡಿದ್ದಾರೆ. ಅದರಂತೆ ಮಾಧ್ಯಮಗಳಿಗೆ ಮಾತನಾಡಿರುವ ಅವರು, 1952ರಿಂದಲೂ ಕೋಲಾರ ಕ್ಷೇತ್ರದಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ಕೊಟ್ಟಿಲ್ಲ, ಟಿಕೆಟ್ ನೀಡುವಂತೆ ಕೇಳಿದ್ದೇವೆ. ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದರೆ ಒಳ್ಳೆಯದು, ಒಂದೊಮ್ಮೆ ಹೈಕಮಾಂಡ್ ಟಿಕೆಟ್ ನೀಡದಿದ್ದರೆ ಯಾರಿಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಕೆಲಸ ಮಾಡುತ್ತೇವೆ. ಇದರೊಂದಿಗೆ ನಾನು ಯಾವ ಬಣದಲ್ಲಿಯೂ ಇಲ್ಲ ನನ್ನದು ಕಾಂಗ್ರೆಸ್ ಬಣ ಎಂದು ಹೇಳುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ.