ಕಾರ್ಕಳ: ಧ್ವನಿವರ್ಧಕ ಅನುಮತಿ ಇಲ್ಲದ ಯಕ್ಷಗಾನ ಪ್ರದರ್ಶನ ನಿಲ್ಲಿಸಲು ಮುಂದಾದ ಪೊಲೀಸರು…ಹೈಡ್ರಾಮಾ!

Views: 313
ಕನ್ನಡ ಕರಾವಳಿ ಸುದ್ದಿ: ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಎಂದು ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗಲೇ ಪೊಲೀಸರಿಂದ ತಡೆದಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುನಲ್ಲಿ ನಡೆದಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಯಕ್ಷಗಾನ ತಡೆಯಲಾಗಿದ್ದು, ಆಯೋಜಕರನ್ನು ಅರೆಸ್ಟ್ ಮಾಡಲು ಮುಂದಾದಾಗ ಎಲ್ಲಾ ಗ್ರಾಮಸ್ಥರನ್ನು ಬಂಧನ ಮಾಡಿ ಎಂದು ಸ್ಥಳದಲ್ಲಿ ಹೈಡ್ರಾಮಾವೇ ನಡೆದಿದೆ.
ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿದ ಗ್ರಾಮಸ್ಥರು, “ನಾವು ಪ್ರತಿ ವರ್ಷ ಈ ರೀತಿಯ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸುತ್ತೇವೆ. ಈ ಬಾರಿ ಮಾತ್ರ ಪೊಲೀಸರು ಅನಗತ್ಯ ತೊಂದರೆ ಕೊಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಅಲ್ಲದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರು ಸಕಾಲಿಕವಾಗಿ ಅನುಮತಿ ನೀಡದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಮಾತನಾಡಿ, “ನಾವು ಕೇವಲ ನಿಯಮ ಪಾಲನೆ ಮಾಡುತ್ತಿದ್ದೇವೆ. ಧ್ವನಿವರ್ಧಕಕ್ಕೆ ಅನುಮತಿ ಇಲ್ಲದ ಕಾರಣ ಪ್ರದರ್ಶನವನ್ನು ನಿಲ್ಲಿಸುವಂತೆ ಸೂಚಿಸಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಡ್ಲಿಯ ಈಶ್ವರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಆಯೋಜನೆ ಮಾಡಲಾಗಿದೆ. 10 ಗಂಟೆ ನಂತರ ಧ್ವನಿವರ್ಧಕ ಬಳಸಿದ್ದಕ್ಕೆ ಅಜೆಕಾರು ಠಾಣಾ ಉಪ ನಿರೀಕ್ಷಕ ಶುಭಕರ ಅವರಿಂದ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ದೂರು ದಾಖಲಾದ ಬಗ್ಗೆ ಎಫ್ಐಆರ್ ತೋರಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೊಲೀಸ್ ಸ್ಥಳದಿಂದ ತೆರಳಿದ್ದಾರೆ.
ಆಯೋಜಕರು ಜ.10 ರಂದು ಪರವಾನಿಗೆಗಾಗಿ ಪಿಡಿಓ ಬಳಿ ತೆರಳಿದ್ದರು. ಆದರೆ 3 ದಿನಗಳು ಪಿಡಿಓ ರಜೆ ಮೇಲೆ ತೆರಳಿದ್ದಕ್ಕಾಗಿ ಅನುಮತಿ ದೊರೆತಿರಲಿಲ್ಲ. ಬಳಿಕ ಜನವರಿ 13ರಂದು ಅನುಮತಿಗಾಗಿ ಅಜೆಕಾರು ಠಾಣೆಗೆ ಆಯೋಜಕರು ಹೋಗಿದ್ದಾರೆ. ಆದರೆ ಪಂಚಾಯತ್ ಅನುಮತಿ ತರುವಂತೆ ಪೊಲೀಸರು ತಾಕೀತು ಮಾಡಿದ್ದರು.
ಸದ್ಯ ಯಕ್ಷಗಾನ ಮಂಡಳಿ ಅಧ್ಯಕ್ಷ ಸದಾನಂದ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಮಹಾಲಕ್ಷ್ಮೀ ಸೌಂಡ್ಸ್ನ ಮುಖ್ಯಸ್ಥ ಅಪ್ಪು ವಿರುದ್ಧವೂ ಕೇಸ್ ದಾಖಲಿಸಿದ್ದು, ಸುಪ್ರೀಂ ಕೋರ್ಟ್ ಆದೇಶದ ಕ್ರಮಕ್ಕೆ ಉಡುಪಿ ಪೊಲೀಸರು ಮುಂದಾಗಿದ್ದಾರೆ.
ಸದ್ಯ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಆದೇಶ ಪಾಲಿಸದಿದ್ದರೆ ಆಯಾ ಠಾಣಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಎಚ್ಚರಿಸಿದ್ದು, ಇದೀಗ ಪೊಲೀಸರಿಗೆ ಆರಾಧನಾ ಕಲೆ ವಿರುದ್ಧ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗಿದೆ.
.