ಉತ್ತರ ಕನ್ನಡ ಲೋಕಸಭಾ ಟಿಕೆಟ್ ಯಾರಿಗೆ..? ಚಕ್ರವರ್ತಿ ಸೂಲಿಬೆಲೆ ಅಚ್ಚರಿ ಹೇಳಿಕೆ ಏನು?

Views: 103
ಲೋಕಸಭಾ ಚುನಾವಣೆಗೆ ರಾಜ್ಯದ ಬಹುತೇಕ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಆದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಈ ಬಾರಿ ಬಿಜೆಪಿ ಹೈಕಮಾಂಡ್ ಅನೇಕ ಹಾಲಿ ಸಂಸದರಿಗೆ ಕೋಕ್ ಕೊಟ್ಟು ಹೊಸ ಮುಖಗಳಿಗೆ ಮಣೆ ಹಾಕಿದೆ.
ಇದೇ ರೀತಿ ಉತ್ತರ ಕನ್ನಡದಲ್ಲೂ ಹಾಲಿ ಸಂಸದರಿಂದ ಟಿಕೆಟ್ ಕೈ ತಪ್ಪಿ ಚಕ್ರವರ್ತಿ ಸೂಲಿಬೆಲೆಗೆ ಸಿಗಲಿದೆ ಎನ್ನುವ ಚರ್ಚೆ ಜೋರಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಕಣದಲ್ಲಿರಲಿದ್ದಾರೆ ಎನ್ನುವ ವಿಚಾರಗಳ ಬಗ್ಗೆ ಸ್ವತಃ ಸೂಲಿಬೆಲೆ ಮಾತನಾಡಿದ್ದು, ಚುನಾವಣೆ ಸಮೀಪಿಸುತ್ತಿರುವಾಗಲೇ ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, “ಚುನಾವಣೆ ಟಿಕೆಟ್ ಕೇಳಿಕೊಂಡು ಹೋಗುವುದಿಲ್ಲ. ಒಂದು ವೇಳೆ ಅಂತಹ ಅವಕಾಶ ಬಂದರೆ ಸ್ಪರ್ಧಿಸಲು ವಿರೋಧ ಇಲ್ಲ. ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವ ವಿಚಾರ ಸದ್ಯ ವದಂತಿಯಷ್ಟೆ. 2014, 2019ರಲ್ಲೂ ಇಂತಹ ವದಂತಿ ಹರಡಿತ್ತು. ಈಗ 2024 ರಲ್ಲೂ ಅಂಥದ್ದೊಂದು ವದಂತಿ ಹರಡಿದೆ” ಎಂದರು.
“ರಾಜಕೀಯ ಆಸಕ್ತಿಯ ಪ್ರಶ್ನೆ ಬೇರೆ, ಅದಕ್ಕೆ ನನ್ನ ವಿರೋಧವಿಲ್ಲ. ಆದರೆ ಸೀಟ್ ಕೇಳಿಕೊಂಡು ಹೋಗುವುದಿಲ್ಲ. ಅಂತಹ ಅವಕಾಶ ಬಂದರೆ ಯಾವುದೇ ವಿರೋಧ ಇಲ್ಲ. ಹತ್ತು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವುದನ್ನು ಸ್ವಲ್ಪ ಸಡಿಲ ಮಾಡುತ್ತೇನೆ. ಏನಾದ್ರೂ ಭಗವಂತನ ಇಚ್ಛೆ ಇದ್ದರೆ ಅದು ಆಗೇ ಆಗುತ್ತದೆ. ಆದರೆ ಇದುವರೆಗೆ ನನ್ನನ್ನ ಯಾರೂ ಸಂಪರ್ಕಿಸಿಲ್ಲ, ನಾನೂ ಸಂಪರ್ಕ ಮಾಡಿಲ್ಲ” ಎಂದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಚಕ್ರವರ್ತಿ ಸೂಲಿಬೆಲೆ, ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ ನಾಗರಕಟ್ಟೆ, ಡಾ.ಜಿ ಜಿ.ಹೆಗಡೆ ಕುಮಟಾ, ಹರಿ ಪ್ರಕಾಶ್ ಕೋಣೆಮನೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಮುಂತಾದವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಆದರೆ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.