ರಾಜಕೀಯ

ಈಶ್ವರಪ್ಪ ಮನವೊಲಿಸುವ ಸಂಧಾನ ವಿಫಲ,ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ, ಬಂಡಾಯ ಸ್ಪರ್ಧೆ ಖಚಿತ,ಬಿಜೆಪಿಗೆ ತಲೆ ನೋವು..!?

Views: 72

ಶಿವಮೊಗ್ಗ, ಬಂಡಾಯ ಸ್ಪರ್ಧೆಗೆ ಅಣಿಯಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಜತೆಗಿನ ಸಂಧಾನ ಪ್ರಯತ್ನಗಳು ವಿಫಲವಾಗಿದ್ದು, ತಮ್ಮ ನಿಲುವಿನಿಂದ ಹಿಂದೆ ಸರಿಯಲು ಈಶ್ವರಪ್ಪ ನಿರಾಕರಿಸುವುದರ ಜತೆಗೆ ನಾಳೆ ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಅವರ ಸಭೆಯಿಂದ ದೂರು ಉಳಿಯುವ ತೀರ್ಮಾನಕ್ಕೆ ಬಂದಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ, ಸ್ವತಂತ್ರವಾಗಿ ಚುನಾವಣಾ ಕಣಕ್ಕಿಳಿಯುವ ಘೋಷಣೆ ಮಾಡುವ ಮೂಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿರುವ ಈಶ್ವರಪ್ಪ ಅವರನ್ನು ಮನವೊಲಿಸುವ ಬಿಜೆಪಿ ನಾಯಕರ ಸಂಧಾನ ಯತ್ನ ಫಲ ಕೊಟ್ಟಿಲ್ಲ.

ಇಂದು ಮಾಜಿ ಸಚಿವ,ಶಾಸಕ ಅರಗಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ರವಿಕುಮಾರ್ ಇವರುಗಳು ಈಶ್ವರಪ್ಪರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರಾದರೂ ಈಶ್ವರಪ್ಪ ಮಾತ್ರ ಯಾವುದಕ್ಕೂ ಸೊಪ್ಪು ಹಾಕಿಲ್ಲ. ಶಿವಮೊಗ್ಗದಿಂದ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ಸಂಧಾನಕ್ಕೆ ಹೋದವರ ಸ್ಥಿತಿ ಬಂದ ದಾರಿಗೆ ಸುಂಕವಿಲ್ಲ ಎಂಬಂತಾಗಿದೆ.

ಈ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೀಗ ಕೆ.ಎಸ್.ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುತ್ತಿರುವುದು ಸಹಜವಾಗಿಯೇ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.

ಈ ನಡುವೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ಬೆಂಗಳೂರಿನ ಕೆಲ ಬಿಜೆಪಿ ಹಿರಿಯ ನಾಯಕರು ಈಶ್ವರಪ್ಪ ಅವರನ್ನು ಭೇಟಿಯಾಗಿ ಸಮಾಲೋಚಿಸಿ, ಬಂಡಾಯ ಸ್ಪರ್ಧೆ ನಿರ್ಧಾರದಿಂದ ಹಿಂದಕ್ಕೆ ಸರಿಯುವಂತೆ ಹಾಗೂ ನಾಳೆ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಆಗಮಿಸುವಂತೆ ಮನವೊಲಿಕೆಗೆ ತೀವ್ರ ಪ್ರಯತ್ನ ನಡೆಸಿದ್ದರಾದರೂ ಅದಕ್ಕೆ ಈಶ್ವರಪ್ಪರವರು ಸಕಾರಾತ್ಮವಾಗಿ ಸ್ಪಂಧಿಸಿಲ್ಲ. ತಮ್ಮ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.

ಕೆಎಸ್ ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್ ಅವರಿಗೆ ಹಾವೇರಿ ಕ್ಷೇತ್ರದ ಟಿಕೆಟ್ ಕೈತಪ್ಪಲು ತಾವು ಕಾರಣಕರ್ತರಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ಮೋದಿ ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಪರಿಶೀಲನೆ ನಡೆಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಪಕ್ಷದ ನಾಯಕರು ನಿರ್ಧಾರ ಕೈಗೊಂಡಿದ್ದಾರೆ. ಈ ವಿಷಯದಲ್ಲಿ ತಾವು ಯಾವುದೇ ಹಸ್ತಕ್ಷೇಪ ನಡೆಸಿಲ್ಲ. ಈಶ್ವರಪ್ಪ ಅವರು ಕೂಡ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಕೆಲ ವಿಷಯಗಳ ಕುರಿತಂತೆ ಅವರಿಗೆ ನೋವಾಗಿರಬಹುದು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ. ಈಶ್ವರಪ್ಪ ಅವರ ಜೊತೆ ಪಕ್ಷದ ಪ್ರಮುಖರು ಮಾತನಾಡಿದ್ದಾರೆ ಎಂದರು.ನಾಳೆ ಶಿವಮೊಗ್ಗ ನಗರದಲ್ಲಿ ನಡೆಯಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಕೆ ಎಸ್ ಈಶ್ವರಪ್ಪ ಅವರು ಕೂಡ ನಮ್ಮ ಜೊತೆ ವೇದಿಕೆಯಲ್ಲಿ ಇರಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ: ಈಶ್ವರಪ್ಪ

ಲೋಕಸಭೆ ಚುನಾವಣೆ ಟಿಕೆಟ್ ಘೋಷಣೆ ಬೆನ್ನಲ್ಲೇ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನಾಳೆ ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇ ಮಾಡ್ತೀನಿ, ನಾಳೆ ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಯಾರೇ ಏನು ಹೇಳಿದ್ರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಬಿ.ಎಸ್. ಯಡಿಯೂರಪ್ಪ ನನಗೆ ಮಾತ್ರ ಅಲ್ಲ ಎಲ್ಲರಿಗೂ ಮೋಸ ಮಾಡಿದ್ದಾರೆ. ದೆಹಲಿಯ ವರಿಷ್ಠರು ಯಡಿಯೂರಪ್ಪರನ್ನು ದೊಡ್ಡ ನಾಯಕ ಅಂದುಕೊಂಡಿದ್ದಾರೆ. ಇನ್ನೂ ಅವರು ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

 

 

Related Articles

Back to top button