PUC ಫಲಿತಾಂಶ ಬಿಡುಗಡೆಗೆ ಶಿಕ್ಷಣ ಇಲಾಖೆ ಹೊಸ ಮುಹೂರ್ತ ಫಿಕ್ಸ್!
Views: 175
ಕನ್ನಡ ಕರಾವಳಿ ಸುದ್ದಿ: ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೊಂಚ ನಿರಾಸೆಯಾಗಿದೆ. ಏಪ್ರಿಲ್ 7ರಂದು ರಿಸಲ್ಟ್ ಹೊರಬೀಳಲಿದೆ ಎಂಬ ಭಾರಿ ನಿರೀಕ್ಷೆ ಇತ್ತು.
ಆದರೆ, ಕೆಲವು ತಾಂತ್ರಿಕ ಕಾರಣಗಳು ಹಾಗೂ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟಣೆಯನ್ನು ಮುಂದೂಡಲಾಗಿದೆ. ಆದರೂ, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ; ರಿಸಲ್ಟ್ ಬಿಡುಗಡೆಗೆ ಶಿಕ್ಷಣ ಇಲಾಖೆ ಹೊಸ ಮುಹೂರ್ತ ನಿಗದಿಪಡಿಸಿದೆ.
ಫಲಿತಾಂಶ ವಿಳಂಬಕ್ಕೆ ಕಾರಣವೇನು?: ಹೌದು, ಶಿಕ್ಷಣ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಏಪ್ರಿಲ್ 9 ರಂದು ದ್ವಿತೀಯ ಪಿಯುಸಿ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಯಿದೆ. ಈ ವಿಳಂಬಕ್ಕೆ ಪ್ರಮುಖ ಕಾರಣ ಉಪಚುನಾವಣೆ! ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 9ರಂದೇ ಮತದಾನವೂ ನಿಗದಿಯಾಗಿದೆ.
ಈ ಹಿನ್ನೆಲೆಯಲ್ಲಿ ಆ ಭಾಗಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಸಾಮಾನ್ಯವಾಗಿ ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ರಿಸಲ್ಟ್ ಪ್ರಕಟಿಸುತ್ತಾರೆ. ಆದರೆ, ನೀತಿ ಸಂಹಿತೆ ಇರುವುದರಿಂದ ಇದಕ್ಕೆ ಚುನಾವಣಾ ಆಯೋಗದ ವಿಶೇಷ ಅನುಮತಿ ಕಡ್ಡಾಯ. ಈ ಆಡಳಿತಾತ್ಮಕ ಪ್ರಕ್ರಿಯೆಯಿಂದಾಗಿ ಫಲಿತಾಂಶ ಕೊಂಚ ತಡವಾಗಿದೆ.






