150 ಜನೌಷಧಿ ಕೇಂದ್ರಗಳ ಮೇಲೆ ಎಫ್ಡಿಎ ದಿಢೀರ್ ದಾಳಿ; 80ಕ್ಕೂ ಹೆಚ್ಚು ಮಳಿಗೆಗಳಿಗೆ ನೋಟಿಸ್
Views: 31
ಕನ್ನಡ ಕರಾವಳಿ ಸುದ್ದಿ: ಬಡ ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಆರಂಭಿಸಲಾದ ಜನೌಷಧಿ ಕೇಂದ್ರಗಳಲ್ಲಿ ಅಕ್ರಮ ನಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಎಫ್ಡಿಎ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 150 ಜನೌಷಧಿ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಜನೌಷಧಿ ಕೇಂದ್ರಗಳಲ್ಲಿ ಕೇವಲ ಕಡಿಮೆ ಬೆಲೆಯ ‘ಜೆನೆರಿಕ್’ ಔಷಧಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ, ಕೆಲವು ಮಳಿಗೆಗಳ ಮಾಲೀಕರು ಹೆಚ್ಚಿನ ಲಾಭದ ಆಸೆಗಾಗಿ ಖಾಸಗಿ ಕಂಪನಿಗಳ ಔಷಧಿಗಳು ಹಾಗೂ ಸೌಂದರ್ಯವರ್ಧಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ದಾಳಿಯ ವೇಳೆ ಪತ್ತೆಯಾಗಿದೆ.
ಎಫ್ಡಿಎ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಬ್ರಾಂಡೆಡ್ ಔಷಧ ಮಾರಾಟ ಮಾಡುತ್ತಿದ್ದ 80ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿಗೆ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ನಿಯಮ ಉಲ್ಲಂಘನೆ ಮುಂದುವರಿದರೆ ಅಂತಹ ಮಳಿಗೆಗಳ ಪರವಾನಗಿಯನ್ನು (ಲೈಸೆನ್ಸ್) ಶಾಶ್ವತವಾಗಿ ರದ್ದುಪಡಿಸಲಾಗುವುದು ಎಂದು ಔಷಧ ನಿಯಂತ್ರಣ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ದಾಳಿಯ ಸಂದರ್ಭದಲ್ಲಿ ಜನೌಷಧಿ ಕೇಂದ್ರಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬೇರೆ ಬೇರೆ ಖಾಸಗಿ ಕಂಪನಿಗಳ ಬ್ರಾಂಡೆಡ್ ಔಷಧಿಗಳ ಮಾದರಿಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಅವುಗಳನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.






