ಇತರೆ

ಕೋಟೇಶ್ವರದ ಕೊಡಿ ಹಬ್ಬದಲ್ಲಿ ಮಹಿಳೆಯ ಕುತ್ತಿಗೆಯಲ್ಲಿದ್ದ 6 ಲಕ್ಷ ರೂ.ಮೌಲ್ಯದ ಚಿನ್ನದ ಕರಿಮಣಿ ಸರ ಕಳವು 

Views: 41

ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರದಲ್ಲಿ ನಡೆಯುತ್ತಿದ್ದ ಕೊಡಿ ಹಬ್ಬದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವ ಘಟನೆ ನಡೆದಿದೆ. ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ 6 ಲಕ್ಷ ರೂ. ಎಂದು ತಿಳಿದುಬಂದಿದೆ.

ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಹುಣ್ಸೆಮಕ್ಕಿ ನಿವಾಸಿ ಗೀತಾ ಬಿ. ಅವರು ನವೆಂಬರ್ 24ರಂದು ಬೆಳಿಗ್ಗೆ 10.30ರ ಸುಮಾರಿಗೆ ಔಷಧ ತರಲು ತಮ್ಮಪತಿಯೊಂದಿಗೆ ಕುಂದಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕೋಟೇಶ್ವರದಲ್ಲಿ ಕೊಡಿ ಹಬ್ಬ ನಡೆಯುತ್ತಿದ್ದ ಕಾರಣ ಕೋಟೇಶ್ವರ ಬೈಪಾಸ್‌ನಲ್ಲಿ ಬಸ್‌ನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದರು.

ಸುಮಾರು 11.30ರ ವೇಳೆಗೆ ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿದ ಬಳಿಕ, ಮಧ್ಯಾಹ್ನ 12.30ರ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರಭಾಗದಲ್ಲಿ ಊಟದ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಜನಜಂಗುಳಿಯ ನಡುವೆ ಯಾರೋ ಅಪರಿಚಿತ ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅದ್ಧೂರಿಯಾಗಿ ನಡೆದ ಜಾತ್ರೆಗೆ ಭದ್ರತೆಗಾಗಿ ಪೊಲೀಸರು ಹಾಗೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು. ಆದರೂ, ಇಂತಹ ಜನಸಂದಣಿಯಲ್ಲಿ ಸರಗಳ್ಳತನದಂತಹ ಘಟನೆ ಸಂಭವಿಸಿದೆ.

ಕಳವಾದ ಚಿನ್ನದ ಸರದ ಒಟ್ಟು ಅಂದಾಜು ಮೌಲ್ಯ 6 ಲಕ್ಷ ರೂ. ಆಗಿದೆ. ಈ ಕುರಿತು ಗೀತಾ ಅವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!