ಚನ್ನರಾಯಪಟ್ಟಣದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಕುಂದಾಪುರದ ನಾಡಾ-ಚುಂಗಿಗುಡ್ಡೆ ಯುವ ಇಂಜಿನಿಯರ್ ಸಾವು
Views: 182
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ನಾಡ- ಚುಂಗಿಗುಡ್ಡೆ ನಿವಾಸಿ ಯುವಕ ಚನ್ನರಾಯಪಟ್ಟಣದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಾವನಪ್ಪಿದ್ದಾನೆ.
ಮೃತಪಟ್ಟ ಯುವ ಇಂಜಿನಿಯರ್ ಅಕ್ಷಯ ಎನ್ ಹೆಬ್ಬಾರ್ (26)
ರವಿವಾರ ಬೆಳಿಗ್ಗೆ 4 ಗಂಟೆಗೆ ನಾಡ- ಚುಂಗಿಗುಡ್ಡೆಯ ಮನೆಯಿಂದ ಬೈಕ್ ನಲ್ಲಿ ಬೆಂಗಳೂರಿಗೆ ಹೊರಟು ಮಾರ್ಗ ಮಧ್ಯ ಅಪರಾಹ್ನ 12:30 ಹೊತ್ತಿಗೆ ಚನ್ನರಾಯಪಟ್ಟಣದಲ್ಲಿ ನಿಂತ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಕ್ಷಯ ಎನ್ ಹೆಬ್ಬಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನಾಡಾದ ನಾರಾಯಣ ಹೆಬ್ಬಾರ್ ಇವರ ಏಕೈಕ ಪುತ್ರನಾಗಿದ್ದು, ಬೆಂಗಳೂರಿನ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಇತ್ತೀಚಿಗೆ ವರ್ಕ್ ಫ್ರಮ್ ಹೋಂನಲ್ಲಿ ಕೆಲಸ ನಿರ್ವಸುತಿದ್ದಾನೆ.
ಅಕ್ಷಯ್ ಸೌಮ್ಯ ಸ್ವಭಾವದ ಯುವಕನಾಗಿದ್ದು ಕುಟುಂಬದವರೊಂದಿಗೆ ಅತ್ಯಂತ ಆತ್ಮೀಯತೆ ಹೊಂದಿದ್ದರು. ಪ್ರತಿದಿನ ಸಂಜೆ ತಾಯಿಯೊಂದಿಗೆ ಚುಂಗಿಗುಡ್ಡೆ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಅವರ ದಿನಚರಿಯ ಭಾಗವಾಗಿತ್ತು. ಅವರ ತಂದೆ ನಾರಾಯಣ ಹೆಬ್ಬಾರ್ ಎಲ್‌ಐಸಿ ಏಜೆಂಟ್ ಆಗಿದ್ದು, ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಮಗನ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ.
ಓದಿನಲ್ಲಿ ಪ್ರತಿಭಾವಂತನಾಗಿ, ಉತ್ತಮ ಉದ್ಯೋಗ ಪಡೆದು ತಂದೆ-ತಾಯಿಯ ಕನಸುಗಳಿಗೆ ಆಸರೆಯಾಗಿದ್ದ ಯುವಕನ ಬದುಕು ಹೀಗೆ ಅರ್ಧದಲ್ಲೇ ಅಂತ್ಯಗೊಂಡಿರುವುದು ಬಂಧುಮಿತ್ರರು ಹಾಗೂ ಊರಿನವರನ್ನು ದುಃಖಕ್ಕೀಡು ಮಾಡಿದೆ. ಅಕ್ಷಯ್ ಅವರ ಅಕಾಲಿಕ ನಿಧನದಿಂದ ಚುಂಗಿಗುಡ್ಡೆ ಹಾಗೂ ಪಡುಕೋಣೆ ಪರಿಸರದಲ್ಲಿ ಶೋಕದ ಛಾಯೆ ಆವರಿಸಿದೆ.






