ಯುವಜನ

ಪ್ರೇಮ ವೈಫಲ್ಯ: ಬಟ್ಟೆ ಅಂಗಡಿಯ ಚೇಂಜಿಂಗ್ ರೂಮ್‌ನಲ್ಲೇ ಯುವತಿಯ ಹತ್ಯೆ, ಆರೋಪಿ ಪರಾರಿ 

Views: 19

ಕನ್ನಡ ಕರಾವಳಿ ಸುದ್ದಿ: ಗ್ರಾಹಕರು ಬಟ್ಟೆಗಳನ್ನು ಖರೀದಿಸಲು ಬರುವ ಶೋರೂಂ ಒಂದರಲ್ಲಿ ಮಹಿಳಾ ಉದ್ಯೋಗಿಯೊಬ್ಬರ ಬರ್ಬರ ಹತ್ಯೆ ನಡೆದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆತಂಕ ಮೂಡಿಸಿದೆ. ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿಯ ಚೇಂಜಿಂಗ್ ರೂಮ್‌ನಲ್ಲೇ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಈ ಕೃತ್ಯ ಎಸಗಿದ ಆರೋಪಿ ಪರಾರಿಯಾಗಿದ್ದಾನೆ. ಮಹಿಳೆ ತನ್ನ ಪ್ರಾಣ ಉಳಿಸಿಕೊಳ್ಳಲು ಚೇಂಜಿಂಗ್ ರೂಮ್‌ನೊಳಗೆ ಓಡಿದರೂ ಬೆನ್ನಟ್ಟಿದ ಆರೋಪಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಪಶ್ಚಿಮ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ನವೆಂಬರ್ 14ರ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಶಬ್ನಮ್ ಹತ್ಯೆಯಾದ ಮಹಿಳಾ ಉದ್ಯೋಗಿ. ಸೂರಜ್ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಆರೋಪಿ ಸೂರಜ್ ಬಟ್ಟೆ ಶೋರೂಂಗೆ ಬಂದಿದ್ದಾನೆ. ಆತ ತನ್ನೊಂದಿಗೆ ಹರಿತವಾದ ಆಯುಧವನ್ನೂ ತಂದಿದ್ದ ಎನ್ನಲಾಗಿದೆ. ಆರಂಭದಲ್ಲಿ ಶಬ್ನಮ್ ಜೊತೆ ಮಾತನಾಡಿದ್ದ ಆರೋಪಿ, ಬಳಿಕ ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿದ್ದಾನೆ.

ಆರೋಪಿಯ ದಾಳಿಯಿಂದ ತಪ್ಪಿಸಿಕೊಳ್ಳಲು ಶಬ್ನಮ್ ಶೋರೂಂನಲ್ಲಿದ್ದ ಚೇಂಜಿಂಗ್ ರೂಮ್‌ನತ್ತ ಓಡಿದ್ದಾರೆ. ಆದರೆ ಆಕೆಯನ್ನು ಬೆನ್ನಟ್ಟಿಕೊಂಡು ಒಳಗೆ ಹೋದ ಆರೋಪಿ, ಹರಿತವಾದ ಆಯುಧದಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗಳಿಂದ ಶಬ್ನಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ಶೋರೂಂ ಒಳಗೆ ಹಾಗೂ ಸುತ್ತಮುತ್ತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಯ ಚಲನವಲನ, ಆತ ಅಂಗಡಿಗೆ ಬಂದ ಸಮಯ ಹಾಗೂ ಪರಾರಿಯಾದ ಮಾರ್ಗದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಯನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತನಿಖೆಯಿಂದ ತಿಳಿದುಬರಬೇಕಿದೆ.

ಈ ಘಟನೆಯ ಹಿಂದೆ ನಿಖರವಾಗಿ ಯಾವ ಕಾರಣವಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಪ್ರೇಮ ವೈಫಲ್ಯ, ವೈಯಕ್ತಿಕ ದ್ವೇಷ ಅಥವಾ ಒಂಟಿ ಯುವತಿಯರ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ ಈ ಭೀಕರ ಕೃತ್ಯ ನಡೆದಿರಬಹುದು ಎಂದು ಸಾರ್ವಜನಿಕ ಚರ್ಚೆಗಳಲ್ಲಿ ಶಂಕಿಸಲಾಗುತ್ತಿದೆ. ಆದರೆ, ಆರೋಪಿ ಸೂರಜ್ ಮತ್ತು ಮೃತ ಶಬ್ನಮ್ ನಡುವೆ ಯಾವ ರೀತಿಯ ಸಂಬಂಧವಿತ್ತು ಹಾಗೂ ಆತ ಇಂತಹ ಕ್ರೂರ ನಿರ್ಧಾರಕ್ಕೆ ಬರಲು ಕಾರಣವೇನು ಎಂಬುದು ಪೊಲೀಸರ ಸಮಗ್ರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

Related Articles

Back to top button
error: Content is protected !!