ಇತರೆ

ಸರಣಿ ಹತ್ಯೆ ಪ್ರಕರಣ: ಹಂತಕ ಹೆತ್ತವರ ರಕ್ತಸಿಕ್ತ ದೇಹಗಳಿದ್ದ ಕಾರಿನಲ್ಲಿ ಬಾಲಕನನ್ನು ಕುಳ್ಳಿರಿಸಿ ಪ್ರಯಾಣ, ಕರಾಳ ಸತ್ಯ ಬಿಚ್ಚಿಟ್ಟ ಬಾಲಕ!

Views: 82

ಕನ್ನಡ ಕರಾವಳಿ ಸುದ್ದಿ: ಒಂದೇ ಕುಟುಂಬದ ಏಳು ಜನರ ಸರಣಿ ಹತ್ಯೆ ಪ್ರಕರಣದಲ್ಲಿ, ಹಂತಕನ ಕಲ್ಪನೆಗೂ ಮೀರಿದ ರಾಕ್ಷಸೀಯ ಕ್ರೌರ್ಯ ದಿನದಿಂದ ದಿನಕ್ಕೆ ಜಗಜ್ಜಾಹೀರಾಗುತ್ತಿದೆ. ಈ ಭೀಕರ ‘ಹತ್ಯಾ ಕಾಂಡ’ ದಲ್ಲಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ 11 ವರ್ಷದ ಮುಗ್ಧ ಬಾಲಕ, ಪೊಲೀಸರ ಮುಂದೆ ಸತ್ಯ ಬಿಚ್ಚಿಟ್ಟಿದ್ದಾನೆ. ಹತ್ಯೆಗೀಡಾದ ಶಂಕರ್ ಮತ್ತು ನಳಿನಿ ದಂಪತಿಯ ಮಗನಾಗಿರುವ ಈ ಬಾಲಕ, ತನ್ನ ಹೆತ್ತವರ ರಕ್ತಸಿಕ್ತ ಮೃತದೇಹಗಳಿದ್ದ ಕಾರಿನಲ್ಲೇ ಕುಳಿತು, ಹಂತಕ ಇಂದು ಶೇಖರನ ಜತೆಗೆ ನೂರಾರು ಕಿಲೋಮೀಟರ್ ಪ್ರಯಾಣ ಮಾಡಿದ್ದ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ನನ್ನ ತಂದೆ ಶಂಕರ್ ಹಾಗೂ ತಾಯಿ ನಳಿನಿ ಅವರೊಂದಿಗೆ ನಾನು ಇಂದುಶೇಖರ್ ಅವರ ಮನೆಗೆ ಹೋಗಿದ್ದೆ. ರಾತ್ರಿ ಊಟ ಮುಗಿಸಿ ನಾವೆಲ್ಲರೂ ಅಲ್ಲೇ ಮಲಗಿದ್ದೆವು. ಆದರೆ ಮರುದಿನ ಶನಿವಾರ ಬೆಳಿಗ್ಗೆ ನಾನು ಕಣ್ಣೆರೆದು ನೋಡಿದಾಗ ತಂದೆ ಅಲ್ಲಿ ಇರಲಿಲ್ಲ. ತಂದೆ ಎಲ್ಲಿ ಹೋದರು ಎಂದು ಗಾಬರಿಯಿಂದ ತಾಯಿಯೊಂದಿಗೆ ಹೊರಗೆ ಹೋಗಲು ಸಿದ್ಧನಾದೆ. ಅದೇ ಹೊತ್ತಿಗೆ ಮನೆಯಲ್ಲಿದ್ದ ಮತ್ತೊಬ್ಬ ಮಹಿಳೆ (ಅಕ್ಕ) ಏಕಾಏಕಿ ನನ್ನನ್ನು ಮನೆಯ ಕೋಣೆಯೊಳಗೆ ಎಳೆದುಕೊಂಡು ಹೋಗಿ ಬಾಗಿಲು ಚಿಲಕ ಹಾಕಿದರು. ಕೋಣೆಯೊಳಗೆ ನಾನು ಬಂಧಿಯಾಗಿದ್ದಾಗ,

ಹೊರಗಿನಿಂದ ನನ್ನ ತಾಯಿ ಪ್ರಾಣಭಯದಿಂದ ತೀವ್ರವಾಗಿ ಚೀರುತ್ತಿರುವ ಶಬ್ದ ಕೇಳಿಸಿತು. ನನ್ನನ್ನು ಬಿಟ್ಟುಬಿಡಿ ಕಿರುಚಾಡಿದರು. ಆ ನಂತರ ಹೊರಗಡೆ ಸಂಪೂರ್ಣ ನಿಶ್ಯಬ್ದ ಆವರಿಸಿತು. ನನ್ನ ತಾಯಿಗೆ ಏನಾಯಿತು ಎಂದು ತಿಳಿಯದೆ ನಾನು ಕೋಣೆಯೊಳಗೆ ಭಯದಿಂದ ನಡುಗುತ್ತಿದ್ದೆ ಎಂದು ಬಾಲಕ ಆ ಕ್ಷಣದ ಭೀಕರತೆಯನ್ನು ವಿವರಿಸಿದ್ದಾನೆ. ಬಾಲಕನಿದ್ದ ಕೋಣೆಯ ಬಾಗಿಲು ತೆರೆದು ಅತ್ಯಂತ ಸಮಾಧಾನದಿಂದಲೇ ಮಾತನಾಡಿಸಿದ್ದಾನೆ. ಬಾಲಕನನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಪ್ರಯಾಣ ಆರಂಭಿಸಿದ್ದಾನೆ. ಕಾರು ಹತ್ತುವಾಗಲೇ ಡಿಕ್ಕಿಯಲ್ಲಿ ಹಾಗೂ ಸೀಟುಗಳ ಕೆಳಭಾಗದಲ್ಲಿ ದೊಡ್ಡ ದೊಡ್ಡ ಪ್ಲಾಸ್ಟಿಕ್ ಹಾಗೂ ಗೋಣಿಚೀಲಗಳನ್ನು ತುರುಕಲಾಗಿತ್ತು. ಆ ಚೀಲಗಳಲ್ಲಿ ಏನಿದೆ ಎಂದು ನಾನು ಕುತೂಹಲದಿಂದ ಕೇಳಿದೆ. ಅದಕ್ಕೆ ಇಂದುಶೇಖ‌ರ್, ‘ಅವೆಲ್ಲ ಮನೆಯ ಕಸದ ಚೀಲಗಳು, ದೂರದ ನಿರ್ಜನ ಪ್ರದೇಶದಲ್ಲಿ ಎಸೆಯಲು ತೆಗೆದುಕೊಂಡು ಹೋಗುತ್ತಿದ್ದೇನೆ’ ಎಂದು ಸುಳ್ಳು ಹೇಳಿದ. ನಾನು ಕಾರಿನಲ್ಲಿ ಆ ಚೀಲಗಳನ್ನು ಮುಟ್ಟಲು ಅಥವಾ ನೋಡಲು ಪ್ರಯತ್ನಿಸಿದಾಗಲೆಲ್ಲ ಆತ ನನ್ನ ಮೇಲೆ ಸಿಟ್ಟಿನಿಂದ ಗದರುತ್ತಿದ್ದ ಎಂದು ಬಾಲಕ ಹೇಳಿದ್ದಾನೆ.

ತಾನು ಕುಳಿತಿದ್ದ ಸೀಟಿನ ಕೆಳಗೆ ಮತ್ತು ಡಿಕ್ಕಿಯಲ್ಲಿದ್ದುದು ಕಸವಲ್ಲ, ತನ್ನ ಪ್ರೀತಿಯ ಹೆತ್ತವರ ಹಾಗೂ ಕುಟುಂಬಸ್ಥರ ಛಿದ್ರಗೊಂಡ ಮೃತದೇಹಗಳು ಎಂಬ ಸಣ್ಣ ಸುಳಿವು ಕೂಡ ಆ ಮುಗ್ಧ ಬಾಲಕನಿಗೆ ಇರಲಿಲ್ಲ. ಅದೇ ಕಾರಿನಲ್ಲಿ ಹಂತಕ, ಬಾಲಕನನ್ನು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶೃಂಗೇರಿಯಂತಹ ಧಾರ್ಮಿಕ ಕ್ಷೇತ್ರಗಳು ಹಾಗೂ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಸತತವಾಗಿ ಸುತ್ತಾಡಿಸಿದ್ದಾನೆ.

Related Articles

Back to top button
error: Content is protected !!