ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ
Views: 0
ಕನ್ನಡ ಕರಾವಳಿ ಸುದ್ದಿ:” ಗ್ರಾಮೀಣ ಭಾಗದ ಮಕ್ಕಳು ಬಿಸಿಲು-ಮಳೆಗಳನ್ನು ಲೆಕ್ಕಿಸದೇ ದೈಹಿಕ ಶ್ರಮ ವಹಿಸಲು ಶಕ್ತರು. ಅನಾನುಕೂಲ ವಾತಾವರಣದಲ್ಲೂ ತಮ್ಮನ್ನು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಸಹಜ ದೇಹದಾರ್ಢ್ಯತೆ ಬರುವುದರಿಂದ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಧನೆ ಮಾಡಲು ಸಹಾಯಕ”ಎಂದು ಅರೆಶಿರೂರಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಹೈಸ್ಕೂಲಿನ ದೈಹಿಕ ಶಿಕ್ಷಕರಾದ ಶ್ರೀ ರಾಜೀವ ಶೆಟ್ಟಿಯವರು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟನೆಗೈದು ಕರೆ ನೀಡಿದರು.
ಕ್ರೀಡೋತ್ಸವಕ್ಕೆ ಅತಿಥಿಯಾಗಿ ಆಗಮಿಸಿದ ನೆಂಪು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಶಿಕ್ಷಕರಾದ ಶ್ರೀ ವಸಂತ ರಾಜ್ ಶೆಟ್ಟಿಯವರು ಶಿಕ್ಷಣದ ಜೊತೆಗೆ ಕ್ರೀಡೆ ಇದ್ದರೆ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.
ಕಾಲೇಜಿನ ಸಂಚಾಲಕರಾದ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರೂ, ಬೈಂದೂರಿನ ಮಾಜಿ ಶಾಸಕರಾದ ಶ್ರೀ ಬಿ.ಎಂ.ಸುಕುಮಾರ ಶೆಟ್ಟಿಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕುಂದಾಪುರ ತಾಲೂಕಿನ ಜನರ ವ್ಯಾಪಾರ ವ್ಯವಹಾರ, ಆಹಾರೋದ್ಯಮ, ಸುವ್ಯವಸ್ಥೆ ಎಲ್ಲರನ್ನೂ ಬೆರಗುಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿ, ವಿದ್ಯಾರ್ಥಿಗಳು ಇದರಿಂದ ಸ್ಪೂರ್ತಿ ಪಡೆಯಬೇಕು ಎಂದು ಕರೆ ನೀಡಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಶ್ರೀ ಸೀತಾರಾಮ ನಕ್ಕತ್ತಾಯ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ರಾಮ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಷ್ಮಾ ಶೆಣೈಯವರು ಕ್ರೀಡಾ ಜ್ಯೋತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ಮತ್ತು ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನೀಸ್ ನತಾಶಾ ಡಿಸೋಝಾ ರವರು ಪಥಸಂಚಲನ ಕಾರ್ಯಕ್ರಮವನ್ನು ನಿರ್ವಹಿಸಿದರು. ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ತಸ್ವಿ ಎನ್. ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಕೃತಿ ಮತ್ತು ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ಸುಭಾನ್ ರವರು ಕ್ರೀಡಾಗ್ರೇಸರರಾಗಿ ಮೂಡಿ ಬಂದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ರೇಖಾ ಪುತ್ರನ್ ಧನ್ಯವಾದ ಸಲ್ಲಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ರೇವತಿ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು.










