ಇತರೆ

ಸ್ಟುಡಿಯೋಗೆ ನುಗ್ಗಿ ಮಾರಣಾಂತಿಕ ದಾಳಿ: ನಾಲ್ವರಿಗೆ 7 ವರ್ಷ ಜೈಲು!

Views: 10

ಕನ್ನಡ ಕರಾವಳಿ ಸುದ್ದಿ:ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕರೊಬ್ಬರ ಮೇಲೆ ಕತ್ತಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದ ನಾಲ್ವರು ಅಪರಾಧಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತಲಾ 7 ವರ್ಷಗಳ ಜೈಲು ಶಿಕ್ಷೆ ಹಾಗೂ ಒಟ್ಟು ₹88,000 ದಂಡ ವಿಧಿಸಿ ಆದೇಶಿಸಿದೆ.

ಮಹಮ್ಮದ್ ಸೈಫುದ್ದೀನ್, ಮಹಮ್ಮದ್ ಅರ್ಷಾದ್, ಅಬ್ದುಲ್ ರಹಿಮಾನ್ (ಮುನ್ನಿ) ಹಾಗೂ ಮಹಮ್ಮದ್ ಸವಾದ್ ಶಿಕ್ಷೆಗೆ ಗುರಿಯಾದ ದೋಷಿಗಳು.

2020ರ ಅಕ್ಟೋಬರ್ 28ರಂದು ಸಂಜೆ ವೇಳೆ ಫರಂಗಿಪೇಟೆಯಲ್ಲಿರುವ ತಮ್ಮ ಸ್ಟುಡಿಯೋದಲ್ಲಿ ದಿನೇಶ್ ಎಂಬವರು ಕರ್ತವ್ಯದಲ್ಲಿದ್ದರು. ಈ ವೇಳೆ ಪೂರ್ವದ್ವೇಷ ಇಟ್ಟುಕೊಂಡಿದ್ದ ಈ ನಾಲ್ವರು ಆರೋಪಿಗಳು ಏಕಾಏಕಿ ಸ್ಟುಡಿಯೋಗೆ ನುಗ್ಗಿ, ಮಾರಕಾಸ್ತ್ರಗಳಿಂದ ದಿನೇಶ್ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು.

ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 103/2020 ರಂತೆ ಐಪಿಸಿ ಕಲಂ 307 (ಕೊಲೆ ಯತ್ನ), 324, 326, 504, 506 ಜೊತೆಗೆ 34 ರ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ್ದ ಆಗಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ (ಪಿಎಸ್‌ಐ) ಪ್ರಸನ್ನ ಎಂ.ಎಸ್. ಅವರು, ನಾಲ್ವರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ಬಳಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಆರೋಪಿಗಳ ಮೇಲಿನ ಕೊಲೆ ಯತ್ನ ಕೃತ್ಯ ಸಾಬೀತಾಗಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು, ನಾಲ್ವರು ದೋಷಿಗಳಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ಹಾಗೂ 88 ಸಾವಿರ ರೂ. ದಂಡ ವಿಧಿಸಿ ಬುಧವಾರ (ಅಕ್ಟೋಬರ್ 28) ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಜ್ಯೋತಿ ನಾಯಕ್ ವಾದ ಮಂಡಿಸಿದ್ದರು.

Related Articles

Back to top button
error: Content is protected !!