ಇತರೆ

ಬ್ರಹ್ಮಾವರ ಬೈಕಾಡಿಯಲ್ಲಿ ರೌಡಿಶೀಟರ್ ಕೊಲೆ ಪ್ರಕರಣ: ಸಹೋದರರಿಬ್ಬರ ಬಂಧನ

Views: 55

ಕನ್ನಡ ಕರಾವಳಿ ಸುದ್ದಿ: ಹಣಕಾಸಿನ ವಿಚಾರವಾಗಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, ರೌಡಿಶೀಟರ್ ಸುಜಿತ್ ಪಿಂಟೊ (43) ಅವರನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಾಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರಮೋದ್ ಪೂಜಾರಿ ಹಾಗೂ ಆತನ ಸಹೋದರ ಪ್ರದೀಪ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಗೆ ಸಾಮಗ್ರಿಗಳನ್ನು ಪೂರೈಸುತ್ತಿದ್ದ ರಿಕ್ಷಾ ಚಾಲಕ ಪ್ರಮೋದ್ ಪೂಜಾರಿಗೆ ಸುಜಿತ್ ಪಿಂಟೊ ಹಣ ನೀಡಲು ಬಾಕಿ ಇದ್ದುದೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್, ಸುಜಿತ್‌ನನ್ನು ಬೈಕಾಡಿ ಸರ್ಕಲ್ ಬಳಿ ಬರುವಂತೆ ಕರೆದಿದ್ದ. ಅದರಂತೆ ಸುಜಿತ್ ತನ್ನ ಗೆಳೆಯನೊಂದಿಗೆ ಸ್ಥಳಕ್ಕೆ ಬಂದಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಆಗ ಪ್ರಮೋದ್ ಕಬ್ಬಿಣದ ರಾಡ್‌ನಿಂದ ಸುಜಿತ್‌ನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೆಯ ದ್ವೇಷವೂ ಕಾರಣ?

ಸುಜಿತ್ ಪಿಂಟೊ ಐದು ವರ್ಷಗಳ ಹಿಂದೆ ಉಡುಪಿ ಸಂತೆಕಟ್ಟೆಯಿಂದ ಬೈಕಾಡಿಗೆ ಸ್ಥಳಾಂತರಗೊಂಡಿದ್ದ. ಸುಜಿತ್, ಪ್ರಮೋದ್ ಮತ್ತು ಪ್ರದೀಪ್ ಒಂದೇ ತಂಡದಲ್ಲಿದ್ದವರು ಎನ್ನಲಾಗಿದೆ. ಇವರು ಮದ್ಯಪಾನ ಮಾಡಿ ಆಗಾಗ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸುಜಿತ್ ಸಹೋದರರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂಸೆ ನೀಡುತ್ತಿದ್ದ ಎಂಬ ಆರೋಪವೂ ಇದೆ. ಈ ವಿಚಾರವಾಗಿ ಸಹೋದರರೊಂದಿಗೆ ದ್ವೇಷ ಬೆಳೆದಿತ್ತು ಎನ್ನಲಾಗಿದೆ.

ಘಟನೆ ನಡೆದ ಕೂಡಲೇ ಪೊಲೀಸರು ಪ್ರಮೋದ್ ಪೂಜಾರಿಯನ್ನು ಬಂಧಿಸಿದ್ದರು. ಬಳಿಕ ಪರಾರಿಯಾಗಿದ್ದ ಪ್ರದೀಪ್ ಪೂಜಾರಿಗಾಗಿ ಶೋಧ ನಡೆಸಿ ಆತನನ್ನೂ ಬಂಧಿಸಿದ್ದಾರೆ. ಪ್ರದೀಪ್ ರಿಕ್ಷಾ ಚಾಲಕನಾಗಿದ್ದು, ಪ್ರಮೋದ್ ಗಾರೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಜಿತ್

ಸುಜಿತ್ ಪಿಂಟೊ ವಿರುದ್ಧ ಈ ಹಿಂದೆ ಹಲವು ಕೊಲೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ ಹಾಗೂ 2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲೂ ಸುಜಿತ್ ಆರೋಪಿಯಾಗಿದ್ದನು.

ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!