ಬ್ರಹ್ಮಾವರದ ಬೈಕಾಡಿಯಲ್ಲಿ ರೌಡಿಶೀಟರ್ ಹತ್ಯೆ: ರಿಕ್ಷಾ ಚಾಲಕನ ಬಂಧನ
Views: 114
ಕನ್ನಡ ಕರಾವಳಿ ಸುದ್ದಿ:ಬ್ರಹ್ಮಾವರದ ಬೈಕಾಡಿಯಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ರೌಡಿಶೀಟರ್ ಸುಜಿತ್ ಪಿಂಟೊ (43) ಅವರನ್ನು ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾ ಚಾಲಕ ಪ್ರಮೋದ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಮೋದ್ ಸುಜಿತ್ ಪಿಂಟೊ ಅವರ ಮನೆಗೆ ಸಾಮಗ್ರಿಗಳನ್ನು ಪೂರೈಸುತ್ತಿದ್ದನು. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಸುಜಿತ್ ಪಿಂಟೊ ಪ್ರಮೋದ್ಗೆ ಹಣ ಪಾವತಿಸಬೇಕಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಪ್ರಮೋದ್, ಸುಜಿತ್ ಅವರನ್ನು ತಾನು ಇದ್ದ ಸ್ಥಳಕ್ಕೆ ಬರುವಂತೆ ಕರೆದಿದ್ದನು. ಅದರಂತೆ ಅಲ್ಲಿಗೆ ತೆರಳಿದ್ದ ಇಬ್ಬರ ನಡುವೆ ಮದ್ಯದ ಅಮಲಿನಲ್ಲಿ ಜಗಳ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ಪ್ರಮೋದ್ ಕಬ್ಬಿಣದ ರಾಡ್ನಿಂದ ಸುಜಿತ್ ಅವರ ತಲೆಗೆ ಹೊಡೆದಿದ್ದಾನೆ. ಇದರಿಂದ ಸುಜಿತ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸುಜಿತ್ ಪಿಂಟೊ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲೀಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ ಹಾಗೂ 2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲಿಯೂ ಸುಜಿತ್ ಆರೋಪಿಯಾಗಿದ್ದನು.
ಸುಜಿತ್ ಪಿಂಟೊ ಈ ಹಿಂದೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆಯಲ್ಲಿ ವಾಸವಾಗಿದ್ದು, ಕೆಲವು ವರ್ಷಗಳ ಹಿಂದೆ ಬ್ರಹ್ಮಾವರಕ್ಕೆ ಸ್ಥಳಾಂತರಗೊಂಡಿದ್ದನು.
ಘಟನೆಯ ಮಾಹಿತಿ ತಿಳಿದು ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.






