ಇತರೆ

ಸಾಲಿಗ್ರಾಮದಲ್ಲಿ ನಿರ್ಮಾಣ ಹಂತದ 8ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು: ಇಂಜಿನಿಯರ್ ವಿರುದ್ಧ ಕೇಸ್!

Views: 35

ಕನ್ನಡ ಕರಾವಳಿ ಸುದ್ದಿ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಗ್ರಾಮದ ಸಾಲಿಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದ 8ನೇ ಮಹಡಿಯಿಂದ ಬಿದ್ದು ಪಶ್ಚಿಮ ಬಂಗಾಳ ಮೂಲದ 18 ವರ್ಷದ ಯುವ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಖರಿಬಾರಿ ಕೆಂಡಪುಕುರ ನಿವಾಸಿ ಜುಲು ದಾಸ್ ಎಂಬವರ ಮಗ ದೇಬಾಶಿಶ್ ದಾಸ್ (18) ಮೃತಪಟ್ಟ ಯುವಕ. ಈತ ಕಳೆದ 2 ತಿಂಗಳಿಂದ ಶ್ರೀನಿಧಿ ಕನ್ಸ್ಟ್ರಕ್ಷನ್ ಉಚ್ಚಿಲ ಸಂಸ್ಥೆಯಡಿ ಸಾಲಿಗ್ರಾಮದ ಹೊಸ ಕಟ್ಟಡ ಕಾಮಗಾರಿಯಲ್ಲಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದನು.

ಅಕ್ಟೋಬರ್ 24ರಂದು ಬೆಳಿಗ್ಗೆ ದೇಬಾಶಿಶ್ ದಾಸ್ ಸೇರಿದಂತೆ ಇತರ ಕಾರ್ಮಿಕರು 8ನೇ ಮಹಡಿಯಲ್ಲಿ ಸೆಂಟರಿಂಗ್ ಕೆಲಸಕ್ಕೆ ಹಾಜರಾಗಿದ್ದರು. ಮಧ್ಯಾಹ್ನ ಊಟ ಮುಗಿಸಿ ವಾಪಸ್ ಕೆಲಸಕ್ಕೆ ತೆರಳಿದ್ದ ವೇಳೆ, ಮಧ್ಯಾಹ್ನ ಸುಮಾರು 2:30ರ ಸುಮಾರಿಗೆ 8ನೇ ಮಹಡಿಯ ಪ್ಲಂಬಿಂಗ್ ಡಕ್‌ನಲ್ಲಿ ಕೆಲಸ ಮಾಡುತ್ತಿದ್ದ ದೇಬಾಶಿಶ್ ದಾಸ್ ಏಕಾಏಕಿ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದ ಆತನನ್ನು ತಕ್ಷಣವೇ ಕಂಟ್ರಾಕ್ಟರ್ ಹಾಗೂ ಮೇಸ್ತ್ರಿ ಆಂಬುಲೆನ್ಸ್ ಮೂಲಕ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಆತ ದಾರಿ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.ನಗರ ಪ್ರವಾಸ ನೋಡಿ

8ನೇ ಮಹಡಿಯಂತಹ ಅತ್ಯಂತ ಎತ್ತರದ ಹಾಗೂ ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವಾಗ ಕಾರ್ಮಿಕರಿಗೆ ನೆಟ್ಸ್, ಸೇಫ್ಟಿ ಬೆಲ್ಟ್, ಹೆಲ್ಮೆಟ್ ಸೇರಿದಂತೆ ಯಾವುದೇ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸಿರಲಿಲ್ಲ. ಕಟ್ಟಡ ಮಾಲೀಕರು, ಸೈಟ್ ಇಂಜಿನಿಯರ್ , ಕಂಟ್ರಾಕ್ಟರ್ ಹಾಗೂ ಮೇಸ್ತ್ರಿ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವೇ ಈ ಸಾವಿಗೆ ನೇರ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತನ ಸಂಬಂಧಿ ಉತ್ಪಲ್ ಮಂಡಲ್ ನೀಡಿದ ದೂರಿನನ್ವಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!