ಇತರೆ

12 ದಿನಗಳ ಹಿಂದೆ ನಾಪತ್ತೆಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕಿ ಮತ್ತೆ ಕುಟುಂಬ ಸೇರಿದ್ದು, ಪ್ರಕರಣಕ್ಕೆ ತೆರೆ 

Views: 26

ಕನ್ನಡ ಕರಾವಳಿ ಸುದ್ದಿ: ಕೋಝಿಕ್ಕೋಡ್ ಜಿಲ್ಲೆಯ ತೊಟ್ಟಿಲ್‌ಪಾಲಂನಿಂದ ಸರ್ಕಾರಿ ಶಾಲಾ ಶಿಕ್ಷಕಿ ಕೆ. ಅನುಮೋಲ್ ಎಂಬವರು ನಿಗೂಢವಾಗಿ ನಾಪತ್ತೆಯಾಗಿ, 12 ದಿನಗಳ ಬಳಿಕ ಆಕೆ ಪಾಲಕ್ಕಾಡ್‌ನಲ್ಲಿ ಪತ್ತೆಯಾಗಿದ್ದರು. ಇದೀಗ ನ್ಯಾಯಾಲಯದ ಪ್ರಕ್ರಿಯೆಯ ಬಳಿಕ ಕುಟುಂಬದೊಂದಿಗೆ ಮತ್ತೇ ಅನುಮೋಲ್ ಒಂದಾಗಿದ್ದಾರೆ.

ತೊಟ್ಟಿಲ್‌ಪಾಲಂನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಅನುಮೋಲ್ ಅವರು ಅ. 5ರಂದು ನಾಪತ್ತೆಯಾಗಿದ್ದರು. ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿ, ಸುಮಾರು 12 ದಿನಗಳ ಬಳಿಕ ಪಾಲಕ್ಕಾಡ್‌ನ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯ ಪುತುಶೇರಿಯಲ್ಲಿ ಅನುಮೋಲ್ ಹಾಗೂ ಅವರೊಂದಿಗೆ ಇದ್ದ ವಡಕರದ ಅಬ್ದುಲ್ ಸಮದ್‌ ಎಂಬಾತನನ್ನು ಪತ್ತೆಹಚ್ಚಿದ್ದರು.

ಅಬ್ದುಲ್ ಸಮದ್‌ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಿದ್ದು, ವಿವಾಹಿತ ಮಹಿಳೆಯರನ್ನು ಪ್ರೀತಿಯ ನೆಪದಲ್ಲಿ ಕರೆದುಕೊಂಡು ಹೋಗಿ, ಹಣ ಅಥವಾ ಆಸ್ತಿ ಪಡೆದು ನಂತರ ಕೈಬಿಡುತ್ತಿದ್ದನೆಂಬುವುದು ತಿಳಿದು ಬಂದಿದೆ.

ಇಬ್ಬರನ್ನೂ ಕೋಝಿಕ್ಕೋಡ್‌ಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಅನುಮೋಲ್ ಅವರಿಗೆ ಕೌನ್ಸೆಲಿಂಗ್‌ ಕೂಡ ನೀಡಲಾಗಿತ್ತು. ಬಳಿಕ ಅವರನ್ನು ಕಲ್ಲಾಚಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕುಟುಂಬದೊಂದಿಗೆ ತೆರಳುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರು.

ಅನುಮೋಲ್ ಅವರು ಮಕ್ಕಳನ್ನು ಬಿಟ್ಟು ತೆರಳಿದ್ದ ಹಿನ್ನೆಲೆಯಲ್ಲಿ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸುವ ಬಗ್ಗೆಯೂ ಪೊಲೀಸರು ಆರಂಭದಲ್ಲಿ ಚಿಂತನೆ ನಡೆಸಿದ್ದರು. ಮಕ್ಕಳ ಹೇಳಿಕೆಗಳನ್ನು ಕೂಡ ದಾಖಲಿಸಲಾಗಿತ್ತು. ಆದರೆ, ಕುಟುಂಬವು ಅವರನ್ನು ಕ್ಷಮಿಸಿ ಸ್ವೀಕರಿಸಲು ಸಿದ್ಧವಾದ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮದ ನಿರ್ಧಾರದಿಂದ ಪೊಲೀಸರು ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಗರ್ಭಿಣಿಯಾಗಿದ್ದ ಅನುಮೋಲ್ ಅವರಿಗೆ ಗಂಭೀರ ಯಕೃತ್ತಿನ ಕಾಯಿಲೆ ಕಾಣಿಸಿಕೊಂಡಿತ್ತು. ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯೇ ಚಿಕಿತ್ಸೆಗಾಗಿ ಅಗತ್ಯವಾಗಿತ್ತು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸುವುದು ಕಷ್ಟವಾಗಿತ್ತು.

ಅನುಮೋಲ್ ಅವರ ಪತಿ ಸುಭಾಷ್ ತಮ್ಮ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದ್ದರು. ಈ ಶಸ್ತ್ರಚಿಕಿತ್ಸೆಯ ಬಳಿಕ ಅನುಮೋಲ್ ಚೇತರಿಸಿಕೊಂಡು, ನಂತರ ಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಸರ್ಕಾರಿ ಸೇವೆಗೆ ಸೇರಿದ್ದರು. ಇದೀಗ 12 ದಿನಗಳ ಹಿಂದೆ ನಾಪತ್ತೆಯಾಗಿದ್ದ ಅನುಮೋಲ್ ಮತ್ತೆ ಕುಟುಂಬ ಸೇರಿದ್ದು, ಪ್ರಕರಣಕ್ಕೆ ತೆರೆ ಬಿದ್ದಿದೆ.

Related Articles

Back to top button
error: Content is protected !!