ಕಾಂಗ್ರೆಸ್ ಸೇರ್ಪಡೆಗೆ ಆಫರ್ ಬಂದಿರುವುದು ನಿಜ, 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ: ಮಾಜಿ ಶಾಸಕ ಕೆ. ರಘುಪತಿ ಭಟ್
Views: 25
ಕನ್ನಡ ಕರಾವಳಿ ಸುದ್ದಿ: ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಬಿಜೆಪಿಯಿಂದಲೂ ಕರೆಯ ನಿರೀಕ್ಷೆಯಲ್ಲಿದ್ದೇನೆ. ಬಿಜೆಪಿ ಆಹ್ವಾನ ನೀಡಿದರೆ ಅದರ ಬಗ್ಗೆಯೂ ಯೋಚಿಸಬಹುದು. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ಯಾವುದೇ ನಿರ್ಧಾರ ಕೈಗೊಳ್ಳುತ್ತೇನೆ.
ಕಳೆದ ಚುನಾವಣೆ ಸಂದರ್ಭ ತನಗೆ ಅನ್ಯಾಯವಾಗಿದೆ. ತಮ್ಮದೇ ಪಕ್ಷದ ಕೆಲವು ಶಾಸಕರಿಂದ ವೈಯಕ್ತಿಕ ದಬ್ಬಾಳಿಕೆ ಎದುರಿಸಬೇಕಾಯಿತು. ಸಂಘದ ಹಿರಿಯರು ಹಾಗೂ ಬಿಜೆಪಿ ನಾಯಕರು ಯಾರೂ ತಮ್ಮೊಂದಿಗೆ ಮಾತನಾಡದೆ ಇದ್ದದ್ದು ಮನಸ್ಸಿಗೆ ನೋವುಂಟು ಮಾಡಿದೆ ಎಂದರು.
“ಮುಂಬರುವ ಅಂದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ಪಕ್ಕಾ. ಕಾಂಗ್ರೆಸ್ ಪಾರ್ಟಿಯಿಂದ ನನಗೆ ಆಫರ್ ಬಂದಿರುವುದು ಹೌದು. ಆದರೆ, ಕಾರ್ಯಕರ್ತರ ಅಥವಾ ಸ್ಥಳೀಯ ನನ್ನ ಹಿತೈಷಿಗಳ ಅಭಿಪ್ರಾಯವನ್ನು ಪಡೆಯದೇ ಈ ವಿಚಾರದಲ್ಲಿ ನಾನು ಮುಂದಕ್ಕೆ ಹೋಗಲು ಸಾಧ್ಯವಿಲ್ಲ. ಬಿಜೆಪಿಯಿಂದ ನನಗೆ ಆಫರ್ ಬರುತ್ತೋ ಎನ್ನುವುದನ್ನು ಕಾಯುತ್ತಿದ್ದೇನೆ. ಎಲ್ಲವನ್ನೂ ಸಮಯ ಸಂದರ್ಭದಲ್ಲಿ ನಿರ್ಧಾರ ಮಾಡುತ್ತೇನೆ ” ಎಂದು ಉಡುಪಿಯ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.






