16 ವರ್ಷದ ಅಪ್ರಾಪ್ತ ಬಾಲಕನ ಕೊಲೆ, ಚಿಕ್ಕಪ್ಪ ಪೊಲೀಸರಿಗೆ ಶರಣು, ಆಸ್ತಿಗಾಗಿ ನಡೆಯಿತೇ ಹತ್ಯೆ?
Views: 19
ಕನ್ನಡ ಕರಾವಳಿ ಸುದ್ದಿ:ಅಪ್ಪ-ಅಮ್ಮನಿಲ್ಲದ ಬಾಲಕನನ್ನು ಚಿಕ್ಕಪ್ಪನೇ ಕೊಲೆಗೈದಿರುವ ಘಟನೆ ಬೆಂಗಳೂರಿನ ಐವರಕಂಡಪುರದಲ್ಲಿ ನಡೆದಿದೆ.
ಚಿಕ್ಕಪ್ಪನೇ ಕೊಲೆಗೈದಿರುವ ಘಟನೆ ಬೆಂಗಳೂರಿನ ಐವರಕಂಡಪುರದಲ್ಲಿ ನಡೆದಿದೆ. ಕೃಷ್ಣ (16) ಕೊಲೆಯಾದ ಅಪ್ರಾಪ್ತ ಬಾಲಕ
ಆರೋಪಿ ಮೋಹನ್ (ಚಿಕ್ಕಪ್ಪ) ಕೊಲೆ ಬಳಿಕ ವಿಶ್ವನಾಥಪುರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಬೆಂಗಳೂರು ನಗರ ಜಿಲ್ಲೆ ಯಲಹಂಕದ ಹೆಸರಘಟ್ಟ ಬಳಿಯ ಐವರಕಂಡಪುರದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ವಿವರಣೆ: ಹತ್ಯೆಯಾದ ಬಾಲಕ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ಆತನಿಗೆ ಅಣ್ಣನಿದ್ದು, ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಸಹೋದರರಿಬ್ಬರೇ ಮನೆಯಲ್ಲಿ ವಾಸವಾಗಿದ್ದರು. ತಂದೆ-ತಾಯಿ ಇಲ್ಲದ ಮಕ್ಕಳೆಂದು ಊರಿನವರೆಲ್ಲ ಇವರನ್ನು ತಮ್ಮದೇ ಮಕ್ಕಳಂತೆ ಆರೈಕೆ ಮಾಡುತ್ತಿದ್ದರು. ಹೀಗಿರುವಾಗ ಕಳೆದ ಸೋಮವಾರ ಮೃತ ಬಾಲಕನ ಅಣ್ಣ ರಾತ್ರಿ ಸಿನಿಮಾ ನೋಡಲು ಹೋಗಿದ್ದ. ಈ ವೇಳೆ ಚಿಕ್ಕಪ್ಪ ಮೋಹನ್ ಮನೆಯಲ್ಲಿದ್ದ ಮಚ್ಚು ತಂದು ಬಾಲಕನ ಮೇಲೆ ಮನಬಂದಂತೆ ಬೀಸಿ ಕೊಂದಿದ್ದಾನೆ. ತಡರಾತ್ರಿ ಸಿನಿಮಾ ಮುಗಿಸಿ ಬಂದ ಅಣ್ಣ ಸುಸ್ತಾಗಿದ್ದದರಿಂದ ತನ್ನ ಕೋಣೆಗೆ ಹೋಗಿ ಮಲಗಿದ್ದಾನೆ. ಬೆಳಗ್ಗೆ ಬಾಲಕನನ್ನು ನೋಡಲೆಂದು ಸಂಬಂಧಿಕರು ಮನೆಗೆ ಬಂದಾಗ ಕೊಲೆಯಾಗಿರುವುದು ಗಮನಕ್ಕೆ ಬಂದಿದೆ. ಇದರ ಮಧ್ಯೆ ಆರೋಪಿ ಮೋಹನ್ ಅದಾಗಲೇ ವಿಶ್ವನಾಥಪುರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಅಲ್ಲಿನ ಪೊಲೀಸರು ತಕ್ಷಣ ಸೋಲದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಆಸ್ತಿಗಾಗಿ ನಡೆಯಿತೇ ಹತ್ಯೆ? ಇತ್ತೀಚೆಗೆ ಕೃಷ್ಣನ ತಂದೆ ಮುನಿರಾಜು ಅವರ ಆಸ್ತಿಗೆ ಸಂಬಂಧಿಸಿದಂತೆ, ಮುನಿರಾಜು ಸಂಬಂಧಿಕರು ಆತನ ಹೆಸರಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಸುಮಾರು 12 ಲಕ್ಷ ರೂಪಾಯಿಯನ್ನು ಕೃಷ್ಣ ಮತ್ತು ಆತನ ಸಹೋದರನ ಭವಿಷ್ಯಕ್ಕಾಗಿ ಅವರ ಹೆಸರಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿಸಿದ್ದರು. ಈ ಹಣದ ಮೇಲೆ ಚಿಕ್ಕಪ್ಪ ಮೋಹನ್ನ ವಕ್ರದೃಷ್ಟಿ ಬಿದ್ದಿತ್ತು ಎಂದು ಸಂಬಂಧಿಕರು ಹಾಗೂ ನೆರೆಹೊರೆಯವರು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ್, “ಸೋಮವಾರ ರಾತ್ರಿ ಘಟನೆ ನಡೆದಿದ್ದು, ಬೆಳಗ್ಗೆ ಸೋಲದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾಗ 16 ವರ್ಷದ ಅಪ್ರಾಪ್ತ ಯುವಕ ಕೃಷ್ಣ ಕೊಲೆಯಾಗಿರುವುದು ಕಂಡು ಬಂದಿದೆ. ಮೇಲ್ನೋಟಕ್ಕೆ ಅಪ್ರಾಪ್ತನ ಚಿಕ್ಕಪ್ಪನೇ ಕೊಲೆ ಮಾಡಿರುವುದು ಕಂಡುಬಂದಿದೆ. ಆಸ್ತಿ ವಿಚಾರಕ್ಕೆ ನಡೆದಿರುವ ಕೊಲೆ ಎಂಬ ಸಂಶಯ ಇದ್ದು, ತನಿಖೆ ನಡೆಸುತ್ತಿರುವುದಾಗಿ” ತಿಳಿಸಿದರು.






