ಧಾರ್ಮಿಕ

ಒಮಾನಿನಲ್ಲಿ ವಿಜೃಂಭಣೆಯ 42ನೇ ವರ್ಷದ ಗಣೇಶೋತ್ಸವ ಆಚರಣೆ 

Views: 4

ಕನ್ನಡ ಕರಾವಳಿ ಸುದ್ದಿ: ಮಹಾ ಗಣೇಶೋತ್ಸವ ಸಮಿತಿ ತುಳು ಕೂಟ ಮಸ್ಕತ್ ವತಿಯಿಂದ ಸೆಪ್ಟೆಂಬರ್ 14 ರಿಂದ 17ರವರೆಗೆ ಮಸ್ಕತ್ ಶಿವಮಂದಿರದ ಪ್ರಾಂಗಣದಲ್ಲಿ ಗಣೇಶೋತ್ಸವವನ್ನು ಸಾಂಪ್ರದಾಯಿಕವಾಗಿ ಹಾಗೂ ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರಧಾನ ಅರ್ಚಕ ಶ್ರೀ ಶಂಕರ ನಾರಾಯಣ ಅಡಿಗ ಅವರಿಂದ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ ಮತ್ತು ಗಣ ಹೋಮ  ಕಾರ್ಯಕ್ರಮವು ನೆರವೇರಿದವು. ಅವರಿಗೆ ಶ್ರೀ ಗುರುದಾಸ್ ಪೆಜತ್ತಾಯ , ಶ್ರೀ ಸುಧರ್ಶನ್ ಭಟ್ ಮತ್ತು ಇನ್ನಿತರ ಅರ್ಚಕರು ಸಹಯೋಗಿಸಿದರು .ಈ ಭವ್ಯ ಉತ್ಸವದ ಮೂರು ದಿನಗಳಲ್ಲಿ ಪುಣ್ಯಾಹವಾಚನ, ಗಣ ಹೋಮ, ಮಹಾಪೂಜೆ, ರಂಗಪೂಜೆ, ಮತ್ತು ಪುಷ್ಪಾರ್ಚನೆ ಮೊದಲಾದ ವೈದಿಕ ಹಾಗೂ ಭಕ್ತಿ ಕಾರ್ಯಕ್ರಮಗಳು ನಡೆಯಿತು. ಶ್ರದ್ಧಾಳುಗಳ ಲಡ್ಡು ಸೇವೆ ಶತ ಕಾಯಿ ಸೇವೆಗಳನ್ನು ನೈವೇದಿಸಲಾಯಿತು.

ಒಮಾನ್ ಮಹಾ ಗಣೇಶೋತ್ಸವ ಸಮಿತಿಯ .ಶ್ರೀ ಎಸ್.ಕೆ ಪೂಜಾರಿ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಶ್ರೀಉಮೇಶ್ ಬಂಟ್ವಾಳ್, ಶ್ರೀ ಶಶಿಧರ ಶೆಟ್ಟಿ ಮಲ್ಲಾರ್, ಶ್ರೀ ನಾಗೇಶ್ ಶೆಟ್ಟಿ ಕಿನ್ನಿಗೋಳಿ, ಶ್ರೀರವಿ ಕಾಂಚನ್, ಶ್ರೀ ಡಾ.ಸಿ.ಕೆ. ಅಂಚನ್, ಶ್ರೀ ಗುರುದಾಸ್ ಪೆಜತ್ತಾಯ, ಶ್ರೀ ದೇವಾನಂದ್ ಅಮೀನ್, ಶ್ರೀ ಸುಕುಮಾರ್ ಅಂಚನ್, ಶ್ರೀ ಸಚಿನ್ ಕಾಮತ್ ರವರ ಅವಿರತ ಪ್ರಯತ್ನದಿಂದ ಈ ಉತ್ಸವವು ಅತ್ಯಂತ ವೈಭವದಿಂದ ನೆರವೇರಿತು.

ಶಿಲ್ಪಕಲಾವಿದ ಶ್ರೀ ಸದಾಶಿವ ಕಾಮತ್ ರವರು ಸುಂದರ ಗಣಪತಿ ಮೂರ್ತಿಯನ್ನು ನಿರ್ಮಿಸಿದ್ದರು .ವರ್ಣರಂಜಿತ ಗಣೇಶನ ರಂಗೋಲಿ, ತಳಿರು ತೋರಣ ಮತ್ತು ಊರಿನಿಂದ ತರಿಸಿಕೊಂಡ ನಾನಾ ಪುಷ್ಪಗಳಿಂದ ಅಲಂಕೃತ ಭವ್ಯವಾದ ಮಂಟಪದಲ್ಲಿ ಮೂರ್ತಿ ಪ್ರತಿಷ್ಠಾಪನೆಗೊಂಡು, ಭಕ್ತರ ಮನ ಸೂರೆಗೊಂಡಿತು.

ವಿವಿಧ ಭಜನಾ ತಂಡಗಳ ಕಲೋಪಾಸಕರಿಂದ ವೈದಿಕ ಸ್ತೋತ್ರ ಪಠನ, ಶುಕ್ಲ ಯುಜುರ್ವೇದ ಗಾಯನ , ವೈವಿಧ್ಯ ಮಯ ಭಜನೆ, ಶಾಸ್ತ್ರೀಯ ನೃತ್ಯ,ಕರ್ನಾಟಕ ಸಂಗೀತ, ವೀಣಾ ವಾದನದಿಂದ ವಿನಾಯಕ ಹಬ್ಬದಾಚರಣೆಗೆ ಕಳೆಯೇರಿತ್ತು. ಆಪಾರ ಭಕ್ತ ಸಮುದಾಯದ ಸಮ್ಮುಖದಲ್ಲಿ ಭಕ್ತಿ ಭಾವ ಪರವಶತೆಯ ಪಾರಮಾರ್ಥಿಕ ಉತ್ತುಂಗದಲ್ಲಿ ಮೂರನೇ ದಿನ ಭವ್ಯ ಮೂರ್ತಿಯ ವಿಸರ್ಜನೆ ಅಭೂತಪೂರ್ವವಾಗಿ ಅನುಷ್ಠಿತವಾಯಿತು.

ಭಾರತದ ನಾನಾ ಪ್ರದೇಶದಿಂದ ಬಂದು ಇಲ್ಲಿ ನೆಲೆಗೊಂಡ ಗಣಾಧಿಪತಿಯ ಶ್ರದ್ಧಾಳುಗಳು ಪಾಲ್ಗೊಂಡ ಈ ಚೌತಿ ಕಾರ್ಯಕ್ರಮದಲ್ಲಿ ಭಾರತದ ರಾಯಭಾರಿ, ಪ್ರಸಿದ್ಧ ಉದ್ಯಮಿಗಳು ,ಮೊದಲಾದವರು ಶ್ರದ್ಧೆ , ಭಕ್ತಿ ಮತ್ತು ಸಂತೋಷದ ಈ ಭವ್ಯ ಉತ್ಸವದ 42ನೇ ವರ್ಷದ ಆಚರಣೆಯಲ್ಲಿ ಭಾಗವಹಿಸಿದ್ದರು, ಭಾರತೀಯರು ಮಾತ್ರವಲ್ಲದೆ ನೇಪಾಳ, ಥೈಲ್ಯಾಂಡ್, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಅನಿವಾಸಿಗಳೂ ವಿಘ್ನೇಶ್ವರನ  ಅನುಗ್ರಹವನ್ನು ,ಕೃಪೆಯನ್ನು ಬಹಳ ನಿಷ್ಠೆಯಿಂದ ಕೋರಿದರು.ನೆರೆಯ ದೇಶಗಳಾದ ದುಬೈ ನಿಂದಲೂ ಅನೇಕ ಭಕ್ತರು ಉಪಸ್ಥಿತರಿದ್ದರು. ಸಮಾರಂಭದುದ್ದಕ್ಕೂ ಎಲ್ಲಾ ಭಕ್ತರಿಗೆ ಲಡ್ಡು ಪ್ರಸಾದ ನೀಡಲಾಯಿತು. ಶ್ರದ್ಧಾಳು ಭಕ್ತರಿಗೆ ತುಳುನಾಡಿನ ಸಾಂಪ್ರದಾಯಿಕ ವೈವಿಧ್ಯತೆಯ ಹಬ್ಬದೂಟ ಭೋಜನವನ್ನು ಮೂರು ದಿನವೂ ಮಹಾ ಪ್ರಸಾದವಾಗಿ ನೀಡಲಾಯಿತು.

ಪ್ರತಿವರ್ಷದಂತೆ ಪರಿಸರ ಪ್ರಜ್ಞೆ ಯೊಂದಿಗೆ ಶಿಸ್ತುಬದ್ಧತೆಯಿಂದ ಹಾಗೂ ಇಲ್ಲಿನ ಹತ್ತು ಹಲವಾರು ಸ್ವಯಂಸೇವಕರ ಉತ್ಸಾಹದ ನಿಸ್ವಾರ್ಥ ಸೇವೆ ಸಹಕಾರದಿಂದಾಗಿ, ಮತ್ತು ಇಲ್ಲಿನ ಸುಲ್ತಾನರ ಕೃಪೆಯಿಂದಾಗಿ , ಓಮಾನಿನ ಶ್ರದ್ಧಾಳುಗಳು ಇಷ್ಟು ವರ್ಷಗಳಿಂದ ಗಣೇಶ ಹಬ್ಬವನ್ನು ಆಚರಿಸಿ ಪುನೀತರಾಗುವ ಭಾಗ್ಯವನ್ನು ಪಡೆದಿದ್ದಾರೆ .

Report: Nanac Shetty Kinnigoly

Related Articles

Back to top button
error: Content is protected !!