ಶಿಕ್ಷಣ

ತುಂಟಾಟ ಮಾಡಿದ 82 ವಿದ್ಯಾರ್ಥಿಗಳ ಅರ್ಧ ತಲೆ ಬೋಳಿಸಿ ವಿಚಿತ್ರ ಶಿಕ್ಷೆ: ಪೋಷಕರ ಆಕ್ರೋಶ

Views: 171

ಕನ್ನಡ ಕರಾವಳಿ ಸುದ್ದಿ: ಆಟವಾಡುತ್ತಿದ್ದರೆಂಬ ಕಾರಣಕ್ಕೆ ಸುಮಾರು 82 ವಿದ್ಯಾರ್ಥಿಗಳಿಗೆ ಅರ್ಧ ಕ್ಷೌರ ಮಾಡಿ, ಅಲ್ಲಲ್ಲಿ ಬೋಳಿಸಿದ ರೀತಿಯಲ್ಲಿ ಕೂದಲು ಕತ್ತರಿಸಿ ಶಿಕ್ಷೆ ನೀಡಿರುವ ಘಟನೆ ಇದೀಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳ ಕೂದಲನ್ನು ಅಸಮವಾಗಿ ಕತ್ತರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.

ಶನಿವಾರ ವಿದ್ಯಾರ್ಥಿಗಳ ದಿನನಿತ್ಯದ ಸ್ವಚ್ಛತೆ ಹಾಗೂ ಶಿಸ್ತಿನ ಭಾಗವಾಗಿ ಶಾಲೆಯಲ್ಲೇ ಕ್ಷೌರ ಮಾಡಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ಕ್ಷೌರವನ್ನು ವಿಚಿತ್ರ ರೀತಿಯಲ್ಲಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಚಂದ್ರಪುರ ಜಿಲ್ಲೆಯ ಚಿಮೂರು ತಾಲೂಕಿನ ಜಂಬುಲ್‌ಘಾಟ್‌ನ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಕ್ಕಳ ತಲೆಯ ಕೆಲ ಭಾಗದ ಕೂದಲನ್ನು ಮಾತ್ರ ಕತ್ತರಿಸಿ, ಇನ್ನೂ ಕೆಲವು ಕಡೆ ಬೋಳಿಸಿದಂತೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಅಸಹಜ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.

ಮಕ್ಕಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೋಷಕರು ಹಾಗೂ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಇಂತಹ ಅವಮಾನಕರ ರೀತಿಯ ಶಿಕ್ಷೆ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಷಯ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ಶಾಲೆಯನ್ನು ಸಂಪರ್ಕಿಸಿ, ವಿದ್ಯಾರ್ಥಿಗಳ ಕೂದಲನ್ನು ಕೂಡಲೇ ಸಮವಾಗಿ ಕತ್ತರಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಅದೇ ದಿನ ಮಕ್ಕಳ ಕೂದಲನ್ನು ಸರಿಪಡಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಶಾಲೆಯ ಮುಖ್ಯೋಪಾಧ್ಯಾಯರು ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಘಟನೆ ಕುರಿತು ಶಾಲೆಯ ಕಡೆಯಿಂದ ನೀಡಲಾಗಿರುವ ಕಾರಣಗಳು ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿವೆ.

ಮಕ್ಕಳ ಸ್ವಚ್ಛತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ಅಧೀಕ್ಷಕರು ಸ್ಪಷ್ಟನೆ ನೀಡಿದ್ದಾರೆ. ಮಳೆಯ ಕಾರಣದಿಂದ ಕ್ಷೌರ ಕಾರ್ಯ ವಿಳಂಬವಾಯಿತು ಎಂದೂ, ಟ್ರಿಮ್ಮರ್‌ನ ಚಾರ್ಜ್ ಖಾಲಿಯಾದ ಕಾರಣ ಕ್ಷೌರ ಅರ್ಧಕ್ಕೆ ನಿಂತಿತು ಎಂದೂ ಶಾಲಾ ಅಧಿಕಾರಿಗಳು ಹೇಳಿದ್ದಾರೆ.

ಇದೇ ವೇಳೆ, ವಿದ್ಯಾರ್ಥಿಗಳ ತುಂಟಾಟ ಮತ್ತು ಆಟಾಟೋಪದಿಂದ ಸಿಟ್ಟಿಗೆದ್ದ ಅಧೀಕ್ಷಕರು ಈ ರೀತಿಯ ಶಿಕ್ಷೆ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಶಾಲೆಯ ವಿವಿಧ ಸಮರ್ಥನೆಗಳು ಪೋಷಕರನ್ನು ತೃಪ್ತಿಪಡಿಸಿಲ್ಲ.

ಕೇವಲ ನೋಟಿಸ್ ನೀಡುವುದು ಅಥವಾ ಕಾಗದಪತ್ರಗಳ ಮೂಲಕ ಕ್ರಮ ಕೈಗೊಂಡಂತೆ ತೋರಿಸುವುದು ಸಾಕಾಗುವುದಿಲ್ಲ ಎಂದು ಪೋಷಕರು ಆಗ್ರಹಿಸಿದ್ದಾರೆ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ಅವಮಾನವಾಗುವ ರೀತಿಯ ಶಿಕ್ಷೆಗಳಿಗೆ ಅವಕಾಶ ಇರಬಾರದು. ವಿದ್ಯಾರ್ಥಿಗಳ ಗೌರವ ಹಾಗೂ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.

Related Articles

Back to top button
error: Content is protected !!