ಬ್ರಹ್ಮಾವರದಲ್ಲಿ ಹೆತ್ತ ತಾಯಿಯನ್ನು ರಸ್ತೆ ಬದಿಗೆ ಬಿಟ್ಟು ಪರಾರಿಯಾದ ಮಗ, ಸಹಾಯಕ್ಕಾಗಿ ಕಣ್ಣೀರಿಟ್ಟ ವೃದ್ಧೆ!
Views: 221
ಕನ್ನಡ ಕರಾವಳಿ ಸುದ್ದಿ: ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಆರೋಪ ಕೇಳಿಬಂದಿರುವ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ದಿಕ್ಕು ತೋಚದೆ ಪರದಾಡುತ್ತಿದ್ದ 70 ವರ್ಷದ ವೃದ್ಧೆಯನ್ನು ಶಾಲಾ ಬಸ್ ಚಾಲಕರೊಬ್ಬರು ಗಮನಿಸಿ, ಸಮಾಜಸೇವಕ ಹಾಗೂ ಪೊಲೀಸರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸಮೀಪ ಅಪರಿಚಿತ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶಣೈ ಅವರು ಗಮನಿಸಿದ್ದಾರೆ. ಕೂಡಲೇ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ತೆರಳಿದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನಿಂದ ವೃದ್ಧೆಯನ್ನು ಸುರಕ್ಷಿತವಾಗಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾತಿ ಸಂದರ್ಭದಲ್ಲಿ ವೃದ್ಧೆ ತಮ್ಮ ಹೆಸರು ಸರಸ್ವತಿ (70) ಎಂದು ತಿಳಿಸಿದ್ದು, ತಮಿಳುನಾಡಿನ ತಿರುವಳ್ಳೂವೂರು ನಿವಾಸಿ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸ್ವಂತ ಮಗನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ಕಣ್ಣೀರಿಡುತ್ತಾ ಅಳಲು ತೋಡಿಕೊಂಡಿದ್ದಾರೆ.
ವೃದ್ಧೆಯ ಹೇಳಿಕೆಯ ಪ್ರಕಾರ, ಕುಟುಂಬದ ಸದಸ್ಯರೊಬ್ಬರು ಅವರನ್ನು ಬ್ರಹ್ಮಾವರಕ್ಕೆ ಕರೆತಂದು ಬಳಿಕ ಅಲ್ಲಿಯೇ ಬಿಟ್ಟು ತೆರಳಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಬ್ರಹ್ಮಾವರ ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.
ವೃದ್ಧೆಯನ್ನು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಆರೋಪದ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸರು ಪರಿಶೀಲನೆ ನಡೆಸುವ ನಿರೀಕ್ಷೆಯಿದೆ. ವೃದ್ಧೆಯ ಕುಟುಂಬದ ಸದಸ್ಯರನ್ನು ಪತ್ತೆಹಚ್ಚಿ, ಘಟನೆಯ ನೈಜ ಕಾರಣ ತಿಳಿದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಸದ್ಯ ವೃದ್ಧೆಗೆ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಹಾಗೂ ಆರೈಕೆ ನೀಡಲಾಗುತ್ತಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು, ಶಾಲಾ ಬಸ್ ಚಾಲಕ ರಾಮನಾಥ್ ಶಣೈ ಹಾಗೂ ತುರ್ತು ಪೊಲೀಸ್ ಸಿಬ್ಬಂದಿಯ ಸಮಯೋಚಿತ ನೆರವಿನಿಂದ ವೃದ್ಧೆಗೆ ಸುರಕ್ಷಿತ ಆಶ್ರಯ ದೊರೆತಿದೆ.






