ಗೌರಿ ಗಣೇಶ ಹಬ್ಬಕ್ಕೆ ತವರಿಗೆ ಬಂದಿದ್ದ ಗೃಹಿಣಿ ಭೀಕರ ರಸ್ತೆ ಅಪಘಾತದಲ್ಲಿ ಸಾವು
Views: 80
ಕನ್ನಡ ಕರಾವಳಿ ಸುದ್ದಿ: ಗೌರಿ–ಗಣೇಶ ಹಬ್ಬ ಆಚರಿಸಲು ತವರು ಮನೆಗೆ ಬಂದಿದ್ದ 31 ವರ್ಷದ ಗೃಹಿಣಿ, ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹಾಸನದ ಎನ್.ಆರ್.ವೃತ್ತದಲ್ಲಿ ನಡೆದಿದೆ.
ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದ ಅಪರ್ಣಾ ಡಿ.ಜೆ. (31) ಮೃತರು. ಪತಿ ಯೋಗೀಶ್ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದ ಅಪರ್ಣಾ, ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ತವರು ಮನೆಗೆ ಬಂದಿದ್ದರು.
ಶನಿವಾರ ಸ್ನೇಹಿತೆ ರಕ್ಷಿತಾ ಅವರೊಂದಿಗೆ ಆಸ್ಪತ್ರೆಗೆ ತೆರಳಿ, ಬಳಿಕ ಸ್ಕೂಟರ್‌ನಲ್ಲಿ ಊರಿಗೆ ಮರಳುತ್ತಿದ್ದಾಗ ಎನ್.ಆರ್. ವೃತ್ತದ ಬಳಿ ಹಿಂದಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದು, ಅಪರ್ಣಾ ಬಸ್‌ನ ಚಕ್ರಕ್ಕೆ ಸಿಲುಕಿದ್ದಾರೆ. ತಕ್ಷಣ ಆಟೋ ಚಾಲಕ ಕುಮಾರ್ ನೆರವಿಗೆ ಧಾವಿಸಿ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಪರ್ಣಾ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಬಸ್‌ನ ಬ್ರೇಕ್ ಹಿಡಿಯಲಿಲ್ಲ ಎಂದು ಚಾಲಕ ಹೇಳಿರುವುದಾಗಿ ವರದಿಯಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಹಾಸನ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ






