ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಸಾವು
Views: 35
ಕನ್ನಡ ಕರಾವಳಿ ಸುದ್ದಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸುಮಾರು 10 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸೆ.3ರಂದು ಮಣಿಪಾಲದಲ್ಲಿ ನಡೆದಿದೆ
ಅತ್ತೂರು, ಪದವು ಗ್ರಾಮದ ಜಗದೀಶ್ ಆಚಾರ್ಯ (40) ಅವರು 2025ರ ನ.13ರಂದು ಪತ್ನಿ ಐಶ್ವರ್ಯ ಆಚಾರ್ಯ (28) ಅವರನ್ನು ಸ್ಕೂಟರ್ನಲ್ಲಿ ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ನಿಟ್ಟೆಯಿಂದ ಬೆಳ್ಳಣ್-ಮುಂಡೂರು ಮಾರ್ಗವಾಗಿ ಕಿನ್ನಿಗೋಳಿ ಕಡೆಗೆ ತೆರಳುತ್ತಿದ್ದರು. ಬೆಳ್ಳಣ್ ಗ್ರಾಮದ ಇಂದಾರು ಎಂಬಲ್ಲಿ ಬೆಳಗ್ಗೆ 7.20ರ ಸುಮಾರಿಗೆ ಮುಂಡೂರು ಕಡೆಯಿಂದ ಬೆಳ್ಳಣ್ ಕಡೆಗೆ ಬರುತ್ತಿದ್ದ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಜಗದೀಶ್ ಅವರಿಗೆ ಸೊಂಟ ಹಾಗೂ ಕೈಗೆ ಗಾಯವಾಗಿದ್ದು, ಐಶ್ವರ್ಯ ಅವರ ಕುತ್ತಿಗೆ ಮತ್ತು ಬೆನ್ನುಹುರಿಗೆ ತೀವ್ರ ಗಾಯವಾಗಿತ್ತು. ಇಬ್ಬರನ್ನೂ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಒಂದೂವರೆ ತಿಂಗಳ ಚಿಕಿತ್ಸೆ ಬಳಿಕ ಐಶ್ವರ್ಯ ಅವರನ್ನು ಮನೆಗೆ ಕರೆತರಲಾಗಿತ್ತು. ಬೆಡ್ಡನ್ ಆಗಿದ್ದ ಅವರಿಗೆ ಆ.27ರಂದು ಅಪಘಾತದ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದೇ ಸೆ.3ರಂದು ಮುಂಜಾನೆ 3 ಗಂಟೆಗೆ ಐಶ್ವರ್ಯ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






