ರಾಜಕೀಯ

ಪುತ್ರಿಯ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ತಾಯಿಯ ಸಚಿವ ಸ್ಥಾನ ವಜಾ

Views: 73

ಕನ್ನಡ ಕರಾವಳಿ ಸುದ್ದಿ: ತೆಲಂಗಾಣ ಕಾಂಗ್ರೆಸ್ ಸರ್ಕಾರದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಜ್ಯ ಸಚಿವೆ ಕೊಂಡಾ ಸುರೇಖಾ ಅವರನ್ನು ಸಚಿವ ಸಂಪುಟದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಕೈಬಿಡಲು ನಿರ್ಧರಿಸಿದ್ದಾರೆ.

ಸುರೇಖಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಕೋರಿ ಮುಖ್ಯಮಂತ್ರಿಗಳು ರಾಜ್ಯಪಾಲ ಶಿವಪ್ರತಾಪ್ ಶುಕ್ಲಾ ಅವರಿಗೆ ಅಧಿಕೃತ ಶಿಫಾರಸು ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಸಚಿವೆ ಕೊಂಡಾ ಸುರೇಖಾ ಅವರ ಪುತ್ರಿ ಕೊಂಡಾ ಸುಶ್ಮಿತಾ ಪಟೇಲ್ ಇತ್ತೀಚೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರ ವಿರುದ್ಧ ಬಹಿರಂಗವಾಗಿ ತೀವ್ರ ವಾಗ್ದಾಳಿ ನಡೆಸಿದ್ದರು. ಇದು ತೆಲಂಗಾಣ ಕಾಂಗ್ರೆಸ್‌ನಲ್ಲಿ ಭಾರಿ ಬಿರುಗಾಳಿ ಎಬ್ಬಿಸಿತ್ತು. ಸಿಎಂ ಮತ್ತು ಪಕ್ಷದ ನಾಯಕರ ವಿರುದ್ಧ ಸ್ವಪಕ್ಷೀಯ ಸಚಿವರ ಮಗಳೇ ಅಸಮಾಧಾನ ಹೊರಹಾಕಿದ್ದು ಪಕ್ಷದ ಆಂತರಿಕ ಶಿಸ್ತಿಗೆ ಧಕ್ಕೆ ತಂದಿದೆ ಎಂದು ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಪುತ್ರಿಯ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಶಿಸ್ತು ಸಮಿತಿಯು ಕೊಂಡಾ ಸುರೇಖಾ ಅವರಿಗೆ ನೋಟಿಸ್ ನೀಡಿ ವಿವರಣೆ ಕೇಳಿತ್ತು. “ಮಗಳು ನೀಡಿರುವ ವೈಯಕ್ತಿಕ ಹೇಳಿಕೆಗಳಿಗೆ ನಾನು ಜವಾಬ್ದಾರಳಲ್ಲ” ಎಂದು ಸುರೇಖಾ ಸಮರ್ಥನೆ ನೀಡಿದ್ದರಾದರೂ, ಪಕ್ಷದ ನಾಯಕತ್ವ ಅವರ ಸ್ಪಷ್ಟನೆಗೆ ತೃಪ್ತರಾಗಲಿಲ್ಲ.

ಪಕ್ಷದೊಳಗೆ ತೀವ್ರ ಒತ್ತಡ ಮತ್ತು ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕಠಿಣ ಕ್ರಮ ಕೈಗೊಂಡಿದ್ದು, ಸುರೇಖಾ ಅವರ ಸಚಿವ ಸ್ಥಾನಕ್ಕೆ ಕತ್ತರಿ ಹಾಕಿದ್ದಾರೆ. ಈ ದಿಢೀರ್ ಬೆಳವಣಿಗೆಯು ತೆಲಂಗಾಣ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Related Articles

Back to top button
error: Content is protected !!