ಬಿಜೆಪಿ ಪಾದಯಾತ್ರೆಗೆ ತಿರುಗೇಟು:ಜನ ಆಕ್ರೋಶ ಯಾತ್ರೆಗೆ ಕಾಂಗ್ರೆಸ್ ಸಿದ್ಧತೆ!
Views: 15
ಕನ್ನಡ ಕರಾವಳಿ ಸುದ್ದಿ: ರಾಜ್ಯ ಸರಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಆರಂಭಿಸಿರುವ ಪಾದಯಾತ್ರೆಗೆ ತಿರುಗೇಟು ನೀಡಲು ಹಾಗೂ ಬಿಜೆಪಿ ಪಾದಯಾತ್ರೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಆಗಬಹುದಾದ ನಷ್ಟವನ್ನು ತಡೆಯಲು ಕಾಂಗ್ರೆಸ್‌ನಲ್ಲಿ ‘ಆಕ್ರೋಶ ಯಾತ್ರೆ’ಯ ಆಲೋಚನೆ ಶುರುವಾಗಿದೆ.
ಈ ಹಿಂದೆ ಮುಡಾ ಪಾದಯಾತ್ರೆ ಆರಂಭಿಸಿದಾಗ ಅದಕ್ಕೆ ಕೌಂಟರ್ ಕೊಟ್ಟಿದ್ದ ರಾಜ್ಯ ಕಾಂಗ್ರೆಸ್ ಇದೀಗ, ಇದೇ ತಂತ್ರವನ್ನು ಬಳ್ಳಾರಿ ಪಾದಯಾತ್ರೆಗೂ ಮುಂದುವರಿಸಲು ತೀರ್ಮಾನಿಸಿದೆ. ಈ ಯಾತ್ರೆಯನ್ನು ಯಾವ ರೀತಿಯಲ್ಲಿ ಮಾಡಬೇಕು? ರಾಜ್ಯ ನಾಯಕರು ಭಾಗವಹಿಸಬೇಕೇ ಎನ್ನುವ ಗೊಂದಲ ಶೀಘ್ರ ಪರಿಹಾರವಾಗುವ ಸಾಧ್ಯತೆಯಿದೆ. 24 ರಾಜ್ಯದಲ್ಲಿ ಮಾಡಿರುವ ಅನ್ಯಾಯ ಮುಚ್ಚಿಕೊಳ್ಳಲು ನೀವು ಪಾದಯಾತ್ರೆ ಮಾಡುತ್ತಿದ್ದೀರಿ. ಬಿಜೆಪಿಯವರದ್ದು ಪ್ರಾಯಶ್ಚಿತ ಯಾತ್ರೆ. ನಿಮಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಯಾತ್ರೆ ಮಾಡಲಿದೆ. ನಾವು ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ, ನಿಮಗೆ ತಕ್ಕ ಉತ್ತರ ನೀಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ.
ಎರಡು ದಿನ ಪಾದಯಾತ್ರೆ ಪೂರೈಸಿರುವ ಬಿಜೆಪಿಗೆ ಸಡ್ಡು ಹೊಡೆದು ಜನಾಂದೋಲನ ಆಕ್ರೋಶ ಯಾತ್ರೆ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಿದ್ದು, ಇದಕ್ಕೆ ಪೂರಕವಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಬಿಜೆಪಿಯ ಈ ಪಾದಯಾತ್ರೆಗೆ ಕೌಂಟರ್ ಕೊಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಪ್ರಕಾರ, ಬಿಜೆಪಿ ನಾಯಕರ ಆರೋಪಗಳಿಗೆ ನೇರವಾಗಿ ಜನರ ಮುಂದೆಯೇ ಉತ್ತರ ನೀಡಲು ನಿರ್ಧರಿಸಿರುವ ಕಾಂಗ್ರೆಸ್,
ಬಿಜೆಪಿ ಪಾದಯಾತ್ರೆ ಸಾಗಿದ ಮಾರ್ಗದಲ್ಲೇ ಜನಾಂದೋಲನ ಆಕ್ರೋಶ ಯಾತ್ರೆ ಆಯೋಜಿಸಲು ಮುಂದಾಗಿದೆ. ಈ ಯಾತ್ರೆಗೆ ಅಂತಿಮ ರೂಪ ನೀಡುವ ಸಂಬಂಧ ಸ್ಥಳೀಯ ಕಾಂಗ್ರೆಸ್ ನಾಯಕರು ಪಕ್ಷದ ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಪಾದಯಾತ್ರೆ ಬಳ್ಳಾರಿ ತಲುಪುವ ಮುನ್ನವೇ ಈ ಕೌಂಟರ್ ಯಾತ್ರೆಯನ್ನು ಕಾರ್ಯರೂಪಕ್ಕೆ ತರಲು ಯೋಜನೆ ರೂಪಿಲಾಗಿದೆ. ಯಾತ್ರೆಯ ಆರಂಭಿಕ ಸಿದ್ಧತೆಯಾಗಿ ಮೊದಲ ಹಂತದಲ್ಲಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಅಭಿ ಪ್ರಾಯ ಸಂಗ್ರಹಿಸಲು ನಿರ್ಧರಿಸಲಾಗಿದೆ. ಬಳಿಕ ಪೂರ್ಣಪ್ರಮಾಣದ ಯಾತ್ರೆಯ ದಿನಾಂಕ ಮತ್ತು ರೂಪುರೇಷೆಗಳನ್ನು ಅಂತಿಮಗೊಳಿಸಲಾ ಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.






