ಜನಮನ

3 ಲಕ್ಷಕ್ಕೂ ಹೆಚ್ಚು ಮಂದಿ ಗೃಹಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ ತ್ಯಾಗ: ಸರ್ಕಾರಕ್ಕೆ 500 ಕೋಟಿ ರೂ.ಉಳಿತಾಯ!

Views: 29

ಕನ್ನಡ ಕರಾವಳಿ ಸುದ್ದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ದೊರೆಯುವ ಉಚಿತ ವಿದ್ಯುತ್ ಸೌಲಭ್ಯವನ್ನು ರಾಜ್ಯದ 3 ಲಕ್ಷಕ್ಕೂ ಹೆಚ್ಚು ಮಂದಿ ಸ್ವಯಂಪ್ರೇರಿತರಾಗಿ ತ್ಯಜಿಸಿದ್ದಾರೆ.

ಸರ್ಕಾರದ ‘ಗ್ಯಾರಂಟಿ ಗೀವ್ ಅಪ್’ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ವೇಳೆ ಹಲವು ಫಲಾನುಭವಿಗಳು ತಮಗೆ ಯೋಜನೆಯ ಸೌಲಭ್ಯ ಅಗತ್ಯವಿಲ್ಲ ಎಂದು ತಿಳಿಸಿ ಹಿಂದೆ ಸರಿದಿದ್ದಾರೆ.

ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ಸಂದರ್ಭದಲ್ಲಿ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲಾಗುತ್ತಿದೆ. ಇದೇ ವೇಳೆ ಆರ್ಥಿಕವಾಗಿ ಸಬಲರಾಗಿರುವವರು ಹಾಗೂ ಯೋಜನೆಯ ಸೌಲಭ್ಯ ಬೇಡವೆಂದು ಭಾವಿಸುವವರು ಸ್ವಯಂಪ್ರೇರಿತರಾಗಿ ‘ಗೀವ್ ಅಪ್’ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಗ್ಯಾರಂಟಿ ಕೊಟ್ಟು ಈಗ ಅವುಗಳ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಕೈಗೊಂಡಿರುವ ಗೃಹಜ್ಯೋತಿ ಗೀವ್ ಅಪ್ ಅಭಿಯಾನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಗ್ಯಾರಂಟಿ ಗೀವ್ ಅಪ್ ಕುರಿತು ಮಾಹಿತಿ ನೀಡಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ, ಗೃಹಜ್ಯೋತಿ ಮರುಪರಿಶೀಲನೆ ವೇಳೆ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಸ್ವ ಇಚ್ಛೆಯಿಂದ ಉಚಿತ ವಿದ್ಯುತ್ ಸೌಲಭ್ಯ ಬಿಟ್ಟುಕೊಟ್ಟಿರುವುದಾಗಿ ಹೇಳಿದ್ದಾರೆ. ಜೊತೆಗೆ ಗೃಹಜ್ಯೋತಿ ಪರಿಷ್ಕರಣೆಗೆ ಇನ್ನೂ ಒಂದು ತಿಂಗಳು ಗಡುವು ವಿಸ್ತರಣೆ ಮಾಡಲು ಇಂಧನ ಇಲಾಖೆ ಆದೇಶ ಹೊರಡಿಸಿದೆ.

ಜನರು ಸ್ವಯಂ ಪ್ರೇರಿತರಾಗಿ ಈ ಯೋಜನೆಯನ್ನು ಬಿಟ್ಟುಕೊಟ್ಟಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 42 ಕೋಟಿ ರೂ. ಮಾಸಿಕ ಉಳಿತಾಯವಾಗುವ ನಿರೀಕ್ಷೆಯಿದೆ. ವಾರ್ಷಿಕವಾಗಿ ಸುಮಾರು 500 ಕೋಟಿ ರೂ ಆರ್ಥಿಕ ಉಳಿತಾಯವಾಗಲಿದೆ ಎನ್ನುವ ನಿರೀಕ್ಷೆ ಇದೆ.

 

Related Articles

Back to top button
error: Content is protected !!