ತಂದೆ-ಮಗ ಅನುಮಾನಾಸ್ಪದ ಸಾವು: ಪತ್ನಿ ವಶಕ್ಕೆ
Views: 24
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಚಿಕ್ಕಬಾಣವಾರದ ಗುಡ್ಡೆ ಬಸವಪುರದಲ್ಲಿ ತಂದೆ ಹಾಗೂ 5 ವರ್ಷದ ಮಗ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಅಭಿನವ್ (38) ಹಾಗೂ ಅವರ ಮಗ ಯದುವೀರ್ (5) ಮೃತ ದುರ್ದೈವಿಗಳು. ಕುಣಿಗಲ್ ಮೂಲದ ಅಭಿನಂದನ್ ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಗುಡ್ಡಬಸವಪುರದ ಮನೆಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಅಭಿನಂದನ್ ಅವರ ಪತ್ನಿ ಹರಿಣಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ನಾವು ಸಂಬಂಧಿಕರ ಮನೆಗೆ ತೆರಳಿದ್ದು, ಭಾನುವಾರ ಸಂಜೆ ವಾಪಸಾಗಿದ್ದೆವು. ಸೋಮವಾರ ಬೆಳಿಗ್ಗೆ ಎದ್ದಾಗ ಪತಿ ಮತ್ತು ಮಗ ಸ್ಪಂದಿಸದೆ ಬಿದ್ದಿರುವುದು ಕಂಡುಬಂತು ಎಂದು ಹರಿಣಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ದೇಹಗಳ ಮೇಲೆ ಯಾವುದೇ ದೊಡ್ಡ ಗಾಯಗಳು ಕಂಡುಬಂದಿಲ್ಲ, ಆದರೆ, ಸಣ್ಣಪುಟ್ಟ ಗಾಯದ ಗುರುತುಗಳು ಪತ್ತೆಯಾಗಿವೆ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತಿಳಿಯಲಿದೆ. ಇಬ್ಬರ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಸಹಾಯವಾಣಿಗೆ ಬಂದ ಕರೆ ಆಧರಿಸಿ ಚಿಕ್ಕಬಾಣಾವರದ ಸಿಬ್ಬಂದಿ ತೆರಳಿ ಪರಿಶೀಲನೆ ಮಾಡಿದ್ದಾರೆ. ಅಲ್ಲಿ ಕೆಲವು ಸಂಶಯಾಸ್ಪದವಾದ ಅಂಶಗಳು ಕಂಡು ಬಂದಿವೆ. ಮೃತ ಅಭಿನಂದನ್ ಅವರ ತಾಯಿ ಇದೊಂದು ಹತ್ಯೆ ಪ್ರಕರಣ ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಹತ್ಯೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದೇವೆ. ಮನೆಯಲ್ಲಿ ಸಿಸಿಟಿವಿ ಇನ್ಸಾಲ್ ಮಾಡಲಾಗಿದೆ. ಅದನ್ನು ಪರಿಶೀಲನೆ ಮಾಡಿದಾಗ ಫೂಟೇಜ್ ಸರಿಯಾಗಿ ಸೇವ್ ಆಗಿಲ್ಲ ಎಂದು ಕಂಡುಬಂದಿದೆ. ಉದ್ದೇಶಪೂರ್ವಕವಾಗಿ ಸಿಸಿಟಿವಿ ಆಫ್ ಮಾಡಲಾಗಿತ್ತಾ? ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಅಲ್ಲದೇ ತನಿಖೆಯ ಭಾಗವಾಗಿ ಮೃತರ ಪತ್ನಿಯನ್ನು ಕೂಡ ವಿಚಾರಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್ ತಿಳಿಸಿದ್ದಾರೆ.






