ಜಿಲ್ಲಾ ಪಂಚಾಯತ್, ತಾಪಂ ಚುನಾವಣೆ ಯಾವಾಗ? ಮಹತ್ವದ ಘೋಷಣೆ ಮಾಡಿದ ಡಿಕೆಶಿ
Views: 79
ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಈ ವರ್ಷದ ಡಿಸೆಂಬರ್‌ನೊಳಗೆ ಮುಗಿಸಲಾಗುವುದು. ಚುನಾವಣೆ ಪ್ರಕ್ರಿಯೆ ವಿಳಂಬ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಡಿಕೇರಿಯ ಐತಿಹಾಸಿಕ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಡಿಸೆಂಬರ್ ತಿಂಗಳೊಳಗೆ ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳನ್ನು ನಡೆಸಿ ಮುಗಿಸುತ್ತೇವೆ. ಚುನಾವಣೆ ಪ್ರಕ್ರಿಯೆ ವಿಳಂಬ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನೀವೆಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಿಮ್ಮ ಶ್ರಮಕ್ಕೆ ತಕ್ಕಂತೆ ನಿಮಗೆ ಅಧಿಕಾರ ನೀಡಬೇಕು ಎನ್ನುವುದು ನಮ್ಮ ಆಸೆ. ಅಧಿಕಾರ ಹಂಚಿಕೆಯಾದಾಗ ಮಾತ್ರ ಎಲ್ಲ ಸರಕಾರಿ ಕೆಲಸ ಕಾರ್ಯಗಳಿಗೆ ವೇಗ ಸಿಗಲು ಸಾಧ್ಯ ಎಂದು ಕಾರ್ಯಕರ್ತರಲ್ಲಿ ಹುರುಪು ತುಂಬಿದರು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ‘ಭಾರತ್ ಜೋಡೋ ಯುವ ಘಟಕ’ಗಳನ್ನು ನಿರ್ಮಾಣ ಮಾಡಲಾಗುವುದು. ಆ ಮೂಲಕ ಯುವಕರನ್ನು ಸಂಘಟಿಸಿ ಪಕ್ಷದ ಸಿದ್ಧಾಂತಗಳನ್ನು ತಲುಪಿಸಲಾಗುವುದು ಎಂದರು.






