ಶಿಕ್ಷಣ

ಬಸ್ರೂರು ಶ್ರೀ ಶಾರದಾ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ಅಶೋಕಚಕ್ರದಲ್ಲಿ ಅರಳಿದ ತ್ರಿವರ್ಣ; ವಿದ್ಯಾರ್ಥಿಗಳಿಂದ ದೇಶಭಕ್ತಿಯ ಮನಮೋಹಕ ಅನಾವರಣ

Views: 34

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಆವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಾಗೂ ದೇಶಭಕ್ತಿ ವೈಭವದಿಂದ ಕಂಗೊಳಿಸಿತು.

ಕಾರ್ಯಕ್ರಮದ ಅಂಗವಾಗಿ ಮುಖ್ಯ ಅತಿಥಿಗಳಾದ ಶ್ರೀ ಪ್ರಕಾಶ್ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ವಿದ್ಯಾರ್ಥಿಗಳು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ವಸ್ತ್ರಗಳನ್ನು ಧರಿಸಿ ಅಶೋಕ ಚಕ್ರದ ಆಕರ್ಷಕ ಆಕಾರದಲ್ಲಿ ಶಿಸ್ತಿನಿಂದ ನಿಂತು, ತ್ರಿವರ್ಣದ ಸೊಬಗಿನಲ್ಲಿ ದೇಶಭಕ್ತಿಯ ಸಂದೇಶವನ್ನು ಮನಮೋಹಕವಾಗಿ ಸಾರಿದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ನೃತ್ಯ ಹಾಗೂ ಭಾಷಣಗಳ ಮೂಲಕ ಸ್ವಾತಂತ್ರ್ಯದ ಮಹತ್ವವನ್ನು ಬಿಂಬಿಸಿ, ದೇಶಪ್ರೇಮದ ಭಾವವನ್ನು ಮೂಡಿಸಿದರು. ಪುಟಾಣಿ ಮಕ್ಕಳಿಂದ ಹಿರಿಯ ವಿದ್ಯಾರ್ಥಿಗಳವರೆಗೆ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು, ಶಾಲಾ ಆವರಣವನ್ನು ದೇಶಭಕ್ತಿಯ ಸಂಭ್ರಮದಲ್ಲಿ ಮಿಂದೇಳುವಂತೆ ಮಾಡಿದರು.

“ಸ್ವಾತಂತ್ರ್ಯವೆಂಬುದು ಕೇವಲ ಒಂದು ದಿನದ ಆಚರಣೆಯಲ್ಲ; ಅಸಂಖ್ಯಾತ ದೇಶಭಕ್ತರ ತ್ಯಾಗ, ಧೈರ್ಯ ಹಾಗೂ ಹೋರಾಟದ ಫಲವಾಗಿ ದೊರೆತ ಅಮೂಲ್ಯ ಕೊಡುಗೆ. ಅದನ್ನು ಗೌರವಿಸಿ, ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂಬ ಸಂದೇಶ ಕಾರ್ಯಕ್ರಮದ ಆಶಯವಾಗಿ ಮೂಡಿಬಂತು.

ಶಾಲೆಯ ಸಂಚಾಲಕರಾದ ಸಂತೋಷ್ ಶೆಟ್ಟಿ ಅವರು ಮಾತನಾಡಿ, “ಸ್ವಾತಂತ್ರ್ಯವು ನಮ್ಮ ಪೂರ್ವಜರ ತ್ಯಾಗದ ಫಲ. ವಿದ್ಯಾರ್ಥಿಗಳು ದೇಶಪ್ರೇಮ, ಶಿಸ್ತು ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಬೇಕು” ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಪ್ರಕಾಶ್ ಶೆಟ್ಟಿ ಅವರು ತಮ್ಮ ಅರ್ಥಪೂರ್ಣ ಮಾತುಗಳ ಮೂಲಕ ದೇಶಭಕ್ತಿಯ ಕಿಡಿ ಹೊತ್ತಿಸಿ, “ದೇಶವನ್ನು ಪ್ರೀತಿಸುವುದು ಮಾತಿನಲ್ಲಿ ಮಾತ್ರವಲ್ಲ, ನಮ್ಮ ನಡೆ–ನುಡಿಗಳಲ್ಲೂ ಪ್ರತಿಫಲಿಸಬೇಕು. ಇಂದಿನ ಮಕ್ಕಳೇ ನಾಳಿನ ಭಾರತದ ಶಕ್ತಿ” ಎಂಬ ಸ್ಪೂರ್ತಿದಾಯಕ ಸಂದೇಶ ನೀಡಿದರು.

ಶಾಲೆಯ ಪ್ರಾಂಶುಪಾಲರಾದ ಸಂದೀಪ್ ಅವರು, “ಸ್ವಾತಂತ್ರ್ಯ ಕೇವಲ ಧ್ವಜಾರೋಹಣದ ಸಂಭ್ರಮವಲ್ಲ; ಮಕ್ಕಳಲ್ಲಿ ದೇಶಪ್ರೇಮ, ಶಿಸ್ತು, ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವುದೇ ಸ್ವಾತಂತ್ರ್ಯದ ನಿಜವಾದ ಅರ್ಥ” ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳ ಮನಮುಟ್ಟುವಂತೆ ಹೇಳಿದರು.

ವೇಷಭೂಷಣದಲ್ಲಿ ಜೀವಂತಗೊಂಡ ದೇಶದ ಹೆಮ್ಮೆಯ ನಾಯಕರು

ವೇಷಭೂಷಣ ಕಾರ್ಯಕ್ರಮದಲ್ಲಿ ಶಿಜಾ – ರಾಣಿ ಲಕ್ಷ್ಮೀಬಾಯಿ, ಆರುಷಿ (ಅರ್ಹಾ) – ಕಿತ್ತೂರು ರಾಣಿ ಚೆನ್ನಮ್ಮ, ಸುಹೇನ್ ಹಾಗೂ ಅದ್ವೈತ್ ಪೂಜಾರಿ – ಜವಾಹರಲಾಲ್ ನೆಹರೂ, ಆಯಿಷಾ ಹಾನಿಯಾ, ವಿಹಾನ್ ಶೆಟ್ಟಿ, ಶೇಕ್ ಮಹಮ್ಮದ್ ಫಾಜ್ ಹಾಗೂ ಅಚ್ಯುತ – ಭಾರತೀಯ ಸೈನಿಕರು ಸೇರಿದಂತೆ ಹಲವು ವಿದ್ಯಾರ್ಥಿಗಳು ವಿವಿಧ ರಾಷ್ಟ್ರನಾಯಕರು ಹಾಗೂ ದೇಶಸೇವಕರ ಪಾತ್ರಗಳಲ್ಲಿ ಗಮನ ಸೆಳೆದರು.

ಐಶ್ ಮಾಹಿರ್ – ಮದರ್ ತೆರೇಸಾ, ಫಾತಿಮಾ ಝುಹ್ ಹಾಗೂ ಫಾತಿಮಾ ಉಮೈಬಾ – ಕಿತ್ತೂರು ರಾಣಿ ಚೆನ್ನಮ್ಮ, ಅನವಿ – ಭಾರತ ಮಾತೆಯಾಗಿ ಕಂಗೊಳಿಸಿ, ತಮ್ಮ ಪುಟ್ಟ ಹೆಜ್ಜೆಗಳಲ್ಲೇ ದೇಶಭಕ್ತಿಯ ದೊಡ್ಡ ಸಂದೇಶ ಸಾರಿದರು.

ಕಾರ್ಯಕ್ರಮವನ್ನು ಸಹ ಶಿಕ್ಷಕಿಯರಾದ ಪ್ರಿಯ ಹಾಗೂ ಶ್ವೇತಾ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಸಹ ಶಿಕ್ಷಕಿ ನಾಗಶ್ರೀ ಸ್ವಾಗತ ಭಾಷಣ ನೆರವೇರಿಸಿದರೆ, ಸಹ ಶಿಕ್ಷಕಿ ಉಷಾ ವಂದನಾರ್ಪಣೆ ಸಲ್ಲಿಸಿದರು.

ತ್ರಿವರ್ಣದ ಬಣ್ಣಗಳಲ್ಲಿ ಕಂಗೊಳಿಸಿದ ವಿದ್ಯಾರ್ಥಿಗಳ ಅಶೋಕಚಕ್ರ ವಿನ್ಯಾಸ, ಧ್ವಜಾರೋಹಣದ ಗೌರವ, ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಹಾಗೂ ಪುಟಾಣಿ ಮಕ್ಕಳ ದೇಶಭಕ್ತಿಯ ವೇಷಭೂಷಣ—ಇವೆಲ್ಲವೂ ಸೇರಿ 80ನೇ ಸ್ವಾತಂತ್ರ್ಯೋತ್ಸವವನ್ನು ಶಾಲೆಯ ನೆನಪುಗಳಲ್ಲಿ ಅಚ್ಚಳಿಯದ ದೇಶಭಕ್ತಿಯ ಹಬ್ಬವನ್ನಾಗಿ ರೂಪಿಸಿತು.

Related Articles

Back to top button
error: Content is protected !!