ಮಂಗಳೂರು: ಸುರತ್ಕಲ್‌ನಲ್ಲಿ 5ನೇ ಮಹಡಿಯಿಂದ ಹಾರಿ MBBS ವಿದ್ಯಾರ್ಥಿನಿ ಆತ್ಮಹತ್ಯೆ
Views: 37
ಕನ್ನಡ ಕರಾವಳಿ ಸುದ್ದಿ: ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು ತಾನು ವಾಸವಿದ್ದ ಮನೆಯ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್‌ನಲ್ಲಿ ಮಂಗಳವಾರ ನಡೆದಿದೆ.
ಮಂಗಳೂರು ಹೊರವಲಯದ ಮುಕ್ಕದಲ್ಲಿರುವ ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಹುಬ್ಬಳ್ಳಿ ಮೂಲದ ಮಹಾಲಕ್ಷ್ಮೀ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಮಹಾಲಕ್ಷ್ಮೀ ಸುರತ್ಕಲ್‌ನ ಫ್ಲ್ಯಾಟ್ ಒಂದರಲ್ಲಿ ವಾಸ್ತವ್ಯವಿದ್ದು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಳು. ಎರಡನೇ ಮಹಡಿಯ ಫ್ಲ್ಯಾಟ್ನಲ್ಲಿ ವಾಸವಿದ್ದ ಮಹಾಲಕ್ಷ್ಮಿ ತಮ್ಮದೇ ಫ್ಲ್ಯಾಟ್ನ ಐದನೇ ಮಹಡಿಗೆ ಹೋಗಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲದಿದ್ದರೂ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗುತ್ತಿದೆ.
ಹುಬ್ಬಳ್ಳಿಯಿಂದ ಬಂದಿದ್ದ ಆಕೆಯ ಹೆತ್ತವರೂ ಮನೆಯಲ್ಲಿದ್ದು, ಅವರು ಇದ್ದಾಗಲೇ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






