ಜನಮನ

ಧಾರವಾಡದಲ್ಲಿ ಮಳೆಗಾಗಿ ಶಾಸ್ತ್ರೋಕ್ತ ವಿಧಿಗಳ ಮೂಲಕ ಕತ್ತೆ, ಕಪ್ಪೆ ಮದುವೆ ಮಾಡಿದ ಗ್ರಾಮಸ್ಥರು

Views: 21

ಕನ್ನಡ ಕರಾವಳಿ ಸುದ್ದಿ:ಉತ್ತರ ಕರ್ನಾಟಕ ಭಾಗದಲ್ಲಿನ ಜನರು ಮಳೆಯಾಗಲೆಂದು ಅನೇಕ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿಯಂತೂ ಮುಂಗಾರು ಮುನಿಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮಳೆಯಾಗಲಿ ಎಂದು ಪ್ರಾರ್ಥಿಸಿಕೊಂಡ ಗ್ರಾಮಸ್ಥರು ಕತ್ತೆ, ಕಪ್ಪೆ ಮದುವೆ ಮಾಡಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಚೆನ್ನಾಗಿ ಸುರಿದಿದ್ದರಿಂದಾಗಿ ಖುಷಿಯಾಗಿದ್ದ ರೈತರು ಬೇಗನೆ ಕೃಷಿ ಚಟುವಟಿಕೆ ಶುರು ಮಾಡಿ, ಶೇ. 60 ರಷ್ಟು ಬಿತ್ತನೆ ಕಾರ್ಯವನ್ನು ಮುಗಿಸಿದ್ದರು. ಆದರೆ, ಅವಶ್ಯಕತೆ ಇದ್ದಾಗ ಮಳೆಯೇ ಬರುತ್ತಿಲ್ಲ. ಇದರಿಂದಾಗಿ ಬೆಳೆ ಒಣಗಿ ಹೋಗುತ್ತಿವೆ. ಇದೇ ಕಾರಣಕ್ಕೆ ಇದೀಗ ರೈತರು ದೇವರ ಮೊರೆ ಹೋಗವುದರ ಜೊತೆಗೆ ವಿವಿಧ ಆಚರಣೆಗಳನ್ನು ಮಾಡುತ್ತಿದ್ದಾರೆ.

ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಅನೇಕ ಕಡೆಗಳಲ್ಲಿದೆ. ಹೀಗಾಗಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಕತ್ತೆಗಳ ಮದುವೆಯನ್ನು ನೆರವೇರಿಸಲಾಯಿತು. ಗ್ರಾಮದ ಜನರೆಲ್ಲ ಸೇರಿ ಅದ್ಧೂರಿಯಾಗಿ ಮದುವೆಯನ್ನು ನೆರವೇರಿಸಿದರು. ಬೆಳಗ್ಗೆಯಿಂದಲೇ ಮದುವೆಗೆ ಸಂಬಂಧಿಸಿದ ವಿವಿಧ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ ಬಳಿಕ ಮದುವೆಯನ್ನು ಮಾಡಲಾಯಿತು.

ಗಂಡು ಕತ್ತೆಗೆ ಕಾಂತೇಶ ಎಂದೂ, ಹೆಣ್ಣು ಕತ್ತೆಗೆ ಕಸ್ತೂರಿ ಎಂದು ನಾಮಕರಣ ಮಾಡಲಾಗಿತ್ತು. ಗ್ರಾಮದಲ್ಲಿ ಎರಡು ಪಂಗಡಗಳನ್ನು ಮಾಡಿ, ಒಂದು ಪಂಗಡ ವರನ ಕಡೆಯೂ ಮತ್ತೊಂದು ಪಂಗಡ ವಧುವಿನ ಕಡೆಗೂ ಕೆಲಸ ಮಾಡಿತು. ಬೆಳಗ್ಗೆಯಿಂದಲೇ ವರನ ಮನೆಯಿಂದ ಬಾಸಿಂಗ ಪಡೆದುಕೊಂಡು ವಧುವಿನ ಮನೆ ಕಡೆಗೆ ಮೆರವಣಿಗೆ ಮೂಲಕ ಹೋಗಲಾಯಿತು. ಬಳಿಕ ಮತ್ತೆ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಮದುವೆ ವೇದಿಕೆಗೆ ಬರಲಾಯಿತು. ಅಲ್ಲಿ ಅದಾಗಲೇ ನೆರದಿದ್ದ ಜನರ ನಡುವೆ ಮಂತ್ರಘೋಷಗಳು ಮೊಳಗಿದವು. ವಧು – ವರರ ಕಡೆಯ ಪುರೋಹಿತರು ಮಂತ್ರಘೋಷಗಳನ್ನು ನೆರವೇರಿಸಿದರು. ಬಳಿಕ ಕಾಂತೇಶ – ಕಸ್ತೂರಿ ಜೋಡಿಯನ್ನು ಸ್ಥಳಕ್ಕೆ ಕರೆತರಲಾಯಿತು. ಮಾಂಗಲ್ಯವನ್ನು ಪಡೆದುಕೊಂಡು ದೇವಸ್ಥಾನದಲ್ಲಿ ಬಾಸಿಂಗ ಮತ್ತು ಮಾಂಗಲ್ಯದ ಪೂಜೆಯನ್ನು ನೆರವೇರಿಸಲಾಯಿತು. ಬಳಿಕ ಶಾಸ್ತ್ರೋಕ್ತ ವಿಧಿಗಳ ಮೂಲಕ ಮದುವೆಯನ್ನು ನೆರವೇರಿಸಲಾಯಿತು. ಇದೇ ವೇಳೆ, ಕಪ್ಪೆಗಳ ಮದುವೆಯನ್ನು ಕೂಡ ಮಾಡಿಸಲಾಯಿತು. ಹೀಗೆ ಮಾಡುವುದರಿಂದ ಮಳೆಯಾಗುತ್ತದೆ ಎನ್ನುವ ನಂಬಿಕೆ ಸ್ಥಳೀಯರದ್ದಾಗಿದೆ.

Related Articles

Back to top button
error: Content is protected !!