ಯುವಜನ

ಪ್ರಿ-ವೆಡ್ಡಿಂಗ್ ಫೋಟೋ ಶೂಟ್‌ ನಿಗೂಢ ಸಾವು ಪ್ರಕರಣ:ಆಘಾತಕಾರಿ ತಿರುವು..ಆಕಸ್ಮಿಕ ಸಾವಲ್ಲ..ಪಕ್ಕಾ ಪ್ಲಾನ್!

Views: 177

ಕನ್ನಡ ಕರಾವಳಿ ಸುದ್ದಿ: 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ಅವರ ನಿಗೂಢ ಸಾವು ಪ್ರಕರಣ ಆಘಾತಕಾರಿ ತಿರುವು ಪಡೆದುಕೊಂಡಿದೆ.

ಅದು ಆಕಸ್ಮಿಕವಾಗಿ ಸಂಭವಿಸಿದ ಸಾವಲ್ಲ, ಪಕ್ಕಾ ಪ್ಲಾನ್ ಮಾಡಿ ಮಾಡಿರುವ ಕೊಲೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.

ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆ ಬಳಿ ಜೂನ್ 18 ರಂದು ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ ನಿಗೂಢವಾಗಿ ಸಾವನ್ನಪ್ಪಿದ್ದರು. ಪ್ರಕರಣದ ತನಿಖೆ ನಡೆಸಿರುವ ಪುಣೆ ಗ್ರಾಮಾಂತರ ಪೊಲೀಸರು ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.

ಜೂನ್ 19 ರಂದು ಸಿಯಾ ಗೋಯಲ್ ಹುಟ್ಟು ಹಬ್ಬವಿತ್ತು. ಇದರ ಮುನ್ನಾದಿನ ಅಂದರೆ ಜೂನ್ 18 ರಂದು ಬೆಳಿಗ್ಗೆ, ಭಾವಿ ಪತ್ನಿಯ ಬರ್ತ್‌ಡೇ ಆಚರಣೆ ಹಾಗೂ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗಾಗಿ ಕೇತನ್ ಮತ್ತು ಸಿಯಾ ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಬಂದಿದ್ದರು. ಕೋಟೆಯ ತುದಿಯಲ್ಲಿ ಬೆಳಿಗ್ಗೆ 10:30ರ ಸುಮಾರಿಗೆ ಫೋಟೋ ತೆಗೆದುಕೊಳ್ಳುವಾಗ ತೀವ್ರ ಗಾಳಿಗೆ ಕೇತನ್ ಆಯತಪ್ಪಿ 400 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಆರಂಭದಲ್ಲಿ ಬಿಂಬಿಸಲಾಗಿತ್ತು. ಪೊಲೀಸರು ಕೂಡ ಇದನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು.

ತನಿಖೆ ವೇಳೆ ಸಿಯಾ ನೀಡುತ್ತಿದ್ದ ಹೇಳಿಕೆಗಳಲ್ಲಿ ಅನುಮಾನ ವ್ಯಕ್ತವಾಗಿತ್ತು. ಆಕೆಯ ಮೊಬೈಲ್ ಕರೆಗಳ ವಿವರ, ಸಾಮಾಜಿಕ ಜಾಲತಾಣಗಳ ಚಟುವಟಿಕೆ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಿದಾಗ ಕೊಲೆ ಎಂಬ ಅನುಮಾನ ದೃಢವಾಗಿತ್ತು.

ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಿಯಾಳಿಗೆ ಮನೆಯವರು ನಿಶ್ಚಯಿಸಿದ್ದ ಉದ್ಯಮಿ ಕೇತನ್ ಜೊತೆ ವಿವಾಹ ಇಷ್ಟವಿರಲಿಲ್ಲ. ಆಕೆ ಚೇತನ್ ಚೌಧರಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ವಿವಾಹವಾಗಬೇಂದುಕೊಂಡಿದ್ದಳು. ಆದರೆ ಮನೆಯವರು ಕೇತನ್ ಜೊತೆ ಮದುವೆ ಫಿಕ್ಸ್ ಮಾಡಿದ್ದರು. ತನ್ನ ಹಾಗೂ ಚೇತನ್ ಪ್ರೀತಿಗೆ ಕೇತನ್ ಅಡ್ಡಿಯಾಗಿದ್ದಾನೆಂದು ಇಬ್ಬರೂ ಪಕ್ಕಾ ಪ್ಲಾನ್ ಮಾಡಿ ಈ ಕೊಲೆಗೆ ಸಂಚು ರೂಪಿಸಿದ್ದರು.

ಲೋಹಗಢ ಕೋಟೆಯ ತುದಿಗೆ ಬಂದಾಗ ಸಿಯಾ ತನ್ನ ಪ್ರಿಯಕರ ಚೇತನ್‌ನನ್ನು ರಹಸ್ಯವಾಗಿ ಅಲ್ಲಿಗೆ ಕರೆಸಿಕೊಂಡಿದ್ದಳು. ಬಳಿಕ ಇಬ್ಬರೂ ಸೇರಿ ಕೇತನ್‌ನನ್ನು ಕಂದಕಕ್ಕೆ ತಳ್ಳಿ ಸಾಯಿಸಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಕೇತನ್‌ನನ್ನು ಕೊಲ್ಲಲು ಸಿಯಾ ಮತ್ತು ಚೇತನ್ ಚೌಧರಿ ನಡೆಸಿದ ಎರಡನೇ ಪ್ರಯತ್ನ ಇದಾಗಿತ್ತು. ಜೂನ್ 14 ರಂದೂ ಇದೇ ಕೋಟೆಗೆ ಕೇತನ್‌ನನ್ನು ಕರೆತಂದು ಹಾವಿನ ಭಯ ಹುಟ್ಟಿಸಿ ಕಂದಕಕ್ಕೆ ತಳ್ಳಲು ಯತ್ನಿಸಿದ್ದರು ಆದರೆ ಅದು ವಿಫಲವಾಗಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಅಷ್ಟೇ ಅಲ್ಲ ಮದುವೆಗೂ ಮುನ್ನ ಇಬ್ಬರೂ ಇಂಡೋನೇಷ್ಯಾದ ಬಾಲಿ ಪ್ರವಾಸಕ್ಕೆ ತೆರಳಲು ವಿಮಾನ ಹಾಗೂ ಹೋಟೆಲ್ ಬುಕ್ಕಿಂಗ್ ಮುಗಿಸಿದ್ದರು. ಆದರೆ ಪ್ರವಾಸಕ್ಕೆ ಹೊರಡುವ ದಿನವೇ ಹೋಟೆಲ್ ಒಂದರ ಶೌಚಾಲಯದಲ್ಲಿ ಸಿಯಾ ತನ್ನ ಪಾಸ್‌ಪೋರ್ಟ್ ಅನ್ನು ಹರಿದು ಹಾಕಿ, ಪಾಸ್‌ಪೋರ್ಟ್ ಕಳೆದುಹೋಗಿದೆ ಎಂದು ನಾಟಕವಾಡಿ ಪ್ರವಾಸ ರದ್ದಾಗುವಂತೆ ಮಾಡಿದ್ದಳು ಎಂಬ ವಿಚಾರ ಕೂಡ ಕೇತನ್ ಕುಟುಂಬಸ್ಥರು ಬಹಿರಂಗಪಡಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಕೇತನ್ ಮತ್ತು ಸಿಯಾ ವಿವಾಹ ಈ ವರ್ಷದ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಈ ಸಂಬಂಧ ಕುಟುಂಬಗಳು ರಾಜಸ್ಥಾನದ ಅರಮನೆಯೊಂದರಲ್ಲಿ ಅದ್ಧೂರಿ ಮದುವೆಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದವು. ಮಗನನ್ನು ಕಳೆದುಕೊಂಡಿರುವ ಕೇತನ್ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಸದ್ಯ ಆರೋಪಿ ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

Related Articles

Back to top button
error: Content is protected !!